ಸಮಗ್ರ ನ್ಯೂಸ್: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಗೆ ವಿನಾಯಿತಿ ತಿದ್ದುಪಡಿ ವಿಧೇಯಕವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಡಿಸಿದ್ದಾರೆ. ಇದು ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆಗೆ ವಿನಾಯಿತಿ ನೀಡುವ ಮಸೂದೆಯಾಗಿದೆ.
ವೈದ್ಯರ ಕಡ್ಡಾಯ ಗ್ರಾಮೀಣ ಸೇವೆ ಕಾಯ್ದೆ ಜಾರಿಗೆ ತಂದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇತ್ತು. ಹೀಗಾಗಿ ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಿದ ನಂತರ, ಒಂದು ವರ್ಷ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಸರ್ಟಿಫಿಕೇಟ್ ಪಡೆಯಬೇಕು ಎಂಬ ನೀತಿಯನ್ನು ಸರ್ಕಾರ ಅನುಸರಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಹಾಗೂ ಎಂ.ಬಿ.ಬಿ.ಎಸ್ ಪದವಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುತ್ತಿರುವುದರಿಂದ ಈ ವಿಧೇಯಕವನ್ನು ಮಂಡಿಸಲಾಗಿದೆ.
ಒಂದು ವರ್ಷದ ಕಡ್ಡಾಯ ಗ್ರಾಮೀಣ ಸೇವೆ’ ಎಂಬ ಪದಗಳ ಮೊದಲಿಗೆ ‘ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಲಾದಂತೆ ಅಸ್ತಿತ್ವದಲ್ಲಿರುವ ಖಾಲಿಹುದ್ದೆಗಳಲ್ಲಿ’ ಎಂಬ ಪದಗಳನ್ನ ಸೇರಿಸುವ ಮೂಲಕ ತಿದ್ದುಪಡಿ ತರಲಾಗುತ್ತಿದೆ. ಈ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಮಾತ್ರ ವೈದ್ಯರ ಕಡ್ಡಾಯ ಸೇವೆಯನ್ನು ಬಳಸಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.
ಕಡ್ಡಾಯ ಸೇವೆಯಡಿ ಕಾರ್ಯನಿರ್ವಹಿಸುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ಟೈಪಂಡ್ ಅನ್ನು ರಾಜ್ಯ ಸರ್ಕಾರವೇ ನಿರ್ಧರಿಸುವ ಅಧಿಕಾರ ಹೊಂದಿದೆ.
ಅದಲ್ಲದೇ ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸೇವೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯಿತಿ ನೀಡಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ