ಸಮಗ್ರ ನ್ಯೂಸ್: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ವಿಜಿಲೆನ್ಸ್ ವಿಭಾಗವು 11,500 ಕೆಜಿ ತೂಕದ 460 ಚೀಲ ಅಡಿಕೆಯನ್ನು ವಶಪಡಿಸಿಕೊಂಡಿದೆ. ಅಗತ್ಯ ಸಾರಿಗೆ ದಾಖಲೆಗಳನ್ನು ನೀಡದ ಹಿನ್ನಲೆಯಲ್ಲಿ ಸರಕು ಮೂಲದ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಿದ್ದು, ಪರಿಶೀಲನೆ ನಡೆಸಿದಾಗ ಅಕ್ರಮ ಬಯಲಿಗೆ ಬಂದಿದೆ.
ಅಸ್ಸಾಂ ಮತ್ತು ಮಣಿಪುರ ಸೇರಿದಂತೆ ಈಶಾನ್ಯ ಪ್ರದೇಶಗಳಿಂದ ಮಧ್ಯಪ್ರದೇಶ ಮತ್ತು ಬೆಂಗಳೂರಿನ ನೋಂದಣಿಯಾಗದ ವ್ಯಾಪಾರಿಗಳಿಗೆ ಕಡಿಮೆ ಗುಣಮಟ್ಟದ ಅಡಿಕೆಯನ್ನು ಸರಬರಾಜು ಮಾಡುವ ಜಾಲವನ್ನು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ.
ಸಂಬಂಧಿತ ರಾಜ್ಯಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಧಿಕಾರಿಗಳೊಂದಿಗೆ ಸಹಕರಿಸಿ, ನಡೆಸಿದ ವಿಚಾರಣೆಯು ಏರ್‌ವೇ ಬಿಲ್‌ಗಳಲ್ಲಿ ಹೆಸರುಗಳು ಮತ್ತು ಮೊಬೈಲ್ ಸಂಖ್ಯೆಗಳ ಬಳಕೆಯನ್ನು ಬಹಿರಂಗಪಡಿಸಿದೆ, ಮ್ಯಾನ್ಮಾರ್‌ನಿಂದ ಕಳ್ಳಸಾಗಣೆ ಆಗಿರಬಹುದು ಎನ್ನುವ ಸುಳಿವು ನೀಡಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆಯ ಬೆಲೆ ಕೆಜಿಗೆ 25 ರಿಂದ 30 ರೂಪಾಯಿ ಎಂದು ಹೇಳಲಾಗಿದೆ.
ಈಗಾಗಲೇ ಈ ಬಾರಿ ಅಡಿಕೆ ಬೆಲೆ ಕುಸಿತ ಕಂಡಿದ್ದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ, ಈ ನಡುವೆಯೇ ಅಕ್ರಮವಾಗಿ ಮಾರುಕಟ್ಟೆಗೆ ಅಡಿಕೆ ಪೂರೈಕೆಯಾಗುತ್ತಿರುವುದು ಮಾರುಕಟ್ಟೆ ಮೇಲೆ ಮತ್ತಷ್ಟು ಪರಿಣಾಮ ಬೀರಲಿದ್ದು, ದರ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಅಡಿಕೆ ಬೆಳೆಯುವ ಪ್ರಮುಖ ರಾಜ್ಯ ಕರ್ನಾಟಕ, ಭೂತಾನ್‌ನಿಂದ ಹಸಿ ಅಡಿಕೆ ಆಮದಿಗೆ ಸರ್ಕಾರ ಒಪ್ಪಿಗೆ ನೀಡಿದ್ದ ಬೆನ್ನಲ್ಲೇ ರಾಶಿ ಕೆಂಪಡಕೆ ದರ ಅಲ್ಪ ಕುಸಿತ ಕಂಡಿತ್ತು. ಅದರ ಜೊತೆಗೆ ಹೀಗೆ ಭೂತಾನ್, ಮ್ಯಾನ್ಮಾರ್ ನಿಂದ ಅಡಿಕೆ ಅಕ್ರಮವಾಗಿ ಭಾರತಕ್ಕೆ ಬರುತ್ತಿದ್ದು, ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ.