ಸಮಗ್ರ ನ್ಯೂಸ್: ಬೆಳಗಾವಿಯಲ್ಲಿ ಬಿಜೆಪಿ ಮುಖಂಡರೂ ಆಗಿರುವ ರಮೇಶ್ ಜಾರಕಿಹೊಳಿ ಅವರ ಅತ್ಯಾಪ್ತ ಪೃಥ್ವಿ ಸಿಂಗ್ ಅವರಿಗೆ ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಆಪ್ತರು ಚಾಕು ಇರಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಪೃಥ್ವಿ ಸಿಂಗ್ ಅವರ ಕೈ ಹಾಗೂ ಬೆನ್ನಿಗೆ ಗಾಯಗಳಾಗಿದ್ದು, ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನಾಗಿರುವ ಚನ್ನರಾಜ ಹಟ್ಟಿಹೊಳಿ ಅವರು ತಮ್ಮ ಆಪ್ತರಾಗಿರುವ ಸದ್ದಾಂ, ಸುಜಯ್ ಜಾಧವ್, ಚನ್ನರಾಜ ಅವರ ಬಾಡಿಗಾರ್ಡ್ ಅವರಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಪೃಥ್ವಿ ಜೊತೆ ಅವರ ಮನೆ ಸಮೀಪ ಚನ್ನರಾಜ್ ಆಪ್ತರು ಚರ್ಚೆ ನಡೆಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ಭೇಟಿ ನೀಡಿದ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್ ಅವರು ಗಾಯಾಳು ಪೃಥ್ವಿ ಸಿಂಗ್ ಅವರ ಆರೋಗ್ಯ ವಿಚಾರಿಸಿದ್ದಾರೆ. ನಂತರ ಮಾತನಾಡಿದ ನಾರಾಯಣಸ್ವಾಮಿ, ಪೃಥ್ವಿ ಸಿಂಗ್ ಹಲ್ಲೆ ಮಾಡಿದ್ದು ಯಾರು ಎಂದು ತನಿಖೆ ಮಾಡಿ. ಈಗಾಗಲೇ ದೂರು ನೀಡಲಾಗಿದೆ, ಡಿಸಿಪಿ, ಎಸಿಪಿ ಸ್ಥಳಕ್ಕೆ ಬಂದಿದ್ದಾರೆ. ಘಟನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರ ಗಮನಕ್ಕೆ ವಿಚಾರ ತರಲಾಗಿದೆ ಎಂದರು.
ಎಂಎಲ್‌ಸಿ ಕೇಶವ ಪ್ರಸಾದ್ ಮಾತನಾಡಿ, ರಾಜಕೀಯ ದುರುದ್ದೇಶದಿಂದ ಹಲ್ಲೆ ಆಗಿದೆ. ರಾಜಕೀಯ ಪಕ್ಷಗಳ ನಡವೆ ಅಭಿಪ್ರಾಯ ಸಹಜ. ರಾಜ್ಯದಲ್ಲಿ ಈಗಿರುವ ಸರ್ಕಾರ ವಿರೋಧಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಬಿಜೆಪಿ ವೈಯಕ್ತಿಕವಾಗಿ ತೆಗೆದುಕೊಂಡು ಸದನ ಒಳಗೆ, ಹೊರಗೆ ಹೋರಾಟ ಮಾಡುತ್ತೇವೆ ಎಂದರು.
ಪೃಥ್ವಿ ಸಿಂಗ್ ನಿವಾಸಕ್ಕೆ ಬೆಳಗಾವಿಯ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿದರು. ಆದರೂ ಕುಟುಂಬಸ್ಥರು ಮನೆಯಿಂದ ಹೊರಬಂದಿಲ್ಲ. ಸದ್ಯ ಗಾಯಾಳು ಪೃಥ್ವಿ ಸಿಂಗ್ ಅವರಿಗೆ ಕೆಎಲ್‌ಇ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.