ಸಮಗ್ರ ನ್ಯೂಸ್: ವಿಜಯಪುರ ಜಿಲ್ಲೆಯ ರಾಜಗುರು ಪುಡ್ಸ್ ಗೋದಾಮಿನಲ್ಲಿ ಮೆಕ್ಕೆ ಜೋಳ ಮೂಟೆ ತುಂಬುವ ಯಂತ್ರ ಕುಸಿದು ಮೂಟೆಗಳ ಅಡಿ ಸಿಲುಕಿರುವ 10ಕ್ಕೂ ಹೆಚ್ಚು ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಅಗ್ನಿಶಾಮಕ, ಪೊಲೀಸ್, ಹೋಮ್‌ಗಾರ್ಡ್ ಸೇರಿ ಸುಮಾರು 100 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ನಾಲ್ಕು ಕ್ರೇನ್, ನಾಲ್ಕು ಜೆಸಿಬಿಗಳನ್ನೂ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿದೆ.
ಗೋದಾಮಿನಲ್ಲಿ ಅಪಾರ ಪ್ರಮಾಣದಲ್ಲಿ ಗೋವಿನ ಜೋಳ ಸಂಗ್ರಹ ಇರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. 10 ರಿಂದ 12 ಜನ ಕಾರ್ಮಿಕರು ಅದರೊಳಗೆ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ಒಳಗೆ ಸಿಲುಕೊಂಡಿದ್ದ ಓರ್ವನ ರಕ್ಷಣೆ ಮಾಡಿದ್ದೇವೆ. ಇನ್ನೂ ಮೂರು ಜನ ಹೊರಗಡೆ ಇದ್ದು, ಗಾಯಗಳಾಗಿವೆ. ಅವರಿಗೆ ತೊಂದರೆಯಾಗದಂತೆ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಒಳಗೆ ಸಿಲುಕಿದವರಿಗೆ ಆಕ್ಸಿಜನ್ ಪುರೈಸುವ ಕೆಲಸ ಮಾಡುತ್ತಿದ್ದೇವೆ. ಇನ್ನು ಅರ್ಧ ಗಂಟೆಯಲ್ಲಿ ಆಕ್ಸಿಜನ್ ಪೂರೈಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆಗೆ (SDRF) ಬುಲಾವ್ ನೀಡಿದ್ದೇವೆ. ಕಲಬುರ್ಗಿ ಹಾಗೂ ಬೆಳಗಾವಿಯಿಂದ SDRF ತಂಡ ಬರಲಿದೆ. ಅವಶ್ಯ ಎನಿಸಿದಲ್ಲಿ ಎನ್‌ಡಿಆರ್‌ಎಫ್ ಕರೆಯಿಸಿಕೊಳ್ಳಲಾಗುತ್ತದೆ. ಹೈದರಾಬಾದ್, ಪುಣೆಯಿಂದ NDRF ತಂಡ ಬರಬೇಕಿದೆ ಎಂದು ಹೇಳಿದ್ದಾರೆ.