ಸಮಗ್ರ ನ್ಯೂಸ್: ಪೊನ್ನಂಪೇಟೆ ತಾಲೂಕು ಹುದಿಕೇರಿ ಹುಬ್ಬಳ್ಳಿಯ ಹೈಸೂಡಳುರು ಗ್ರಾಮದ ಐಗುಂದ ಬಳಿ ಕೂಟಿಯಾಲ ಹೊಳೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ.
ಹುದಿಕೇರಿಯಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸೇವಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಶ್ವಿನಿ (48) ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳಾದ ನಿಕಿತಾ(21) ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ, ಅಕೆಯ ತಂಗಿ ನವ್ಯ(18) ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದಳು. ಮೂವರ ಶವ ಇಂದು ಕೂಟಿಯಲ ಹೊಳೆಯಲ್ಲಿ ಪತ್ತೆಯಾಗಿದೆ. ಮೂಲತಹ ಮಾದಾಪುರ ಗ್ರಾಮದ ನಿವಾಸಿಯಾದ ಅಶ್ವಿನಿ ಕಳೆದ ಆರು ವರ್ಷಗಳಿಂದ ಹುದಿಕೇರಿಯಲ್ಲೇ ಸೇವಾ ನಿರತ ಪ್ರತಿನಿಧಿಯಾಗಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸೇವೆ ಸಲ್ಲಿಸ್ತಿದಳು. ಹುದಿಕೇರಿಯಲ್ಲೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇವರು ಹೈಸುಡ್ಲೂರು ಬಳಿಯ ಐಗುಂದದಲ್ಲಿ ಒಂದು ಎಕರೆ ಕಾಫಿ ತೋಟವನ್ನು ಕೂಡ ಹೊಂದಿದ್ದರು.
ನಿನ್ನೆ ಮಧ್ಯಾಹ್ನ (ಡಿ.2) ತಮ್ಮ ಸ್ಕೂಟರ್ನಲ್ಲಿ ತಮ್ಮ ತೋಟಕ್ಕೆ ತೆರಳಿರುವುದನ್ನು ಕೆಲವರು ಕಂಡಿದ್ದು ಇಂದು ಮಧ್ಯಾಹ್ನ (ಡಿ. 3)ದವರೆಗೆ ಮನೆಗೆ ಬಾರದಿರುವುದನ್ನು ಕಂಡ ಪಕ್ಕದ ಮನೆಯವರು ಕೆಲವು ಸಾರ್ವಜನಿಕರಿಗೆ ವಿಚಾರ ತಿಳಿಸಿದ್ದರು. ಇದೆ ಸಂದರ್ಭ ಕೂಟಿಯಾಲ ಹೊಳೆ ಸಮೀಪ ತೆರಳಿದ ಕೆಲವರಿಗೆ ಸಂಜೆ ಮೃತ ದೇಹ ಪತ್ತೆಯಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಆಕಸ್ಮಿಕವೂ ಅಥವಾ ಆತ್ಮಹತ್ಯೆಯ ಎಂಬುದನ್ನು ಪೊಲೀಸರ ಮರಣೋತ್ತರ ಪರೀಕ್ಷೆಯಿಂದಲೇ ತಿಳಿಯಬೇಕಾಗಿದೆ.
ಅಶ್ವಿನಿ ಅವರ ಪತಿ ಮಂಡ್ಯ ಮೂಲದವನಾಗಿದ್ದು ಮೈಸೂರಿನಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಕುಟುಂಬ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಬದಲಾಗಿ ಆಕಸ್ಮಿಕವಾಗಿ ಇವರ ತೋಟದ ಬದಿಯಲ್ಲಿ ಇರುವ ಹೂಳಿಗೆ ಜಾರಿ ಬಿದ್ದಿರಬಹುದು ಎಂದು ಹಲವರು ಶಂಕಿಸಿದ್ದಾರೆ. ಶ್ರೀಮಂಗಲ ಪೊಲೀಸರು ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.