ಸಮಗ್ರ ನ್ಯೂಸ್: ಭಾರತ ಕ್ರಿಕೆಟ್‌ನ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಹುಲ್ ದ್ರಾವಿಡ್ ಅವರ ಎರಡು ವರ್ಷಗಳ ಒಪ್ಪಂದ ಮುಕ್ತಾಯಗೊಂಡಿದ್ದು, ನೂತನ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಅಧಿಕಾರ ವಹಿಸಿಕೊಳ್ಳಲಿರುವುದು ಬಹುತೇಕ ಖಚಿತಗೊಂಡಿದೆ.
ಎರಡು ವರ್ಷದಿಂದ ಭಾರತೀಯ ಕ್ರಿಕೆಟ್‌ಗೆ ಮುಖ್ಯಕೋಚ್ ಆಗಿ ಸೇವೆ ಸಲ್ಲಿಸಿದ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕೊನೆಗೊಂಡಿದೆ. ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತದ ಸೋಲಿನೊಂದಿಗೆ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯೂ ಮುಗಿದಿದ್ದು, ದ್ರಾವಿಡ್ ತಂಡದ ಸದಸ್ಯರಾಗಿ ವಿಕ್ರಮ್ ರಾಥೋಡ್(ಬ್ಯಾಟಿಂಗ್ ಕೋಚ್), ಪಾರಸ್ ಮಾಂಬ್ರೆ(ಬೌಲಿಂಗ್ ಕೋಚ್) ಮತ್ತು ಟಿ.ದಿಲೀಪ್(ಫೀಲ್ಡಿಂಗ್ ಕೋಚ್) ಆಗಿ ಸೇವೆ ಸಲ್ಲಿಸಿದ್ದಾರೆ.
2021 ರಲ್ಲಿ ರವಿಶಾಸ್ತ್ರಿ ಅವರಿಂದ ಭಾರತ ತಂಡದ ಮುಖ್ಯಕೋಚ್ ಆಗಿ ಅಧಿಕಾರ ವಹಿಸಿಕೊಂಡ ದ್ರಾವಿಡ್ ಮುಖ್ಯಕೋಚ್ ಆಗಿ ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ ಭಾರತವನ್ನು ನಂಬರ್ ಒನ್ ತಂಡವನ್ನಾಗಿ ಮಾಡಿದ ಕೀರ್ತಿ ದ್ರಾವಿಡ್‌ಗೆ ಸಲ್ಲುತ್ತದೆ. ದ್ರಾವಿಡ್ ಒಪ್ಪಂದವು ನ.19ಕ್ಕೆ ಕೊನೆಗೊಂಡಿದ್ದು, ಮುಖ್ಯ ಕೋಚ್ ಆಗಿ ಮುಂದುವರಿಯುವ ಉದ್ದೇಶ ಅವರು ಹೊಂದಿಲ್ಲ. ಹೀಗಾಗಿ ಹೊಸ ಕೋಚ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮುಖ್ಯಕೋಚ್ಗೆ ಬಿಸಿಸಿಐ ವರ್ಷಕ್ಕೆ 12 ಕೋಟಿ ರೂ.ಪಾವತಿಸುತ್ತಿದೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರಾಗಿರುವ ಆಂಧ್ರದ ವಿವಿಎಸ್ ಲಕ್ಷ್ಮಣ್ ಅವರು ದ್ರಾವಿಡ್ ಅವರ ಅಧಿಕಾರಾವಧಿ ಮುಗಿದ ನಂತರ ಅನಧಿಕೃತವಾಗಿ ಮುಖ್ಯ ಕೋಚ್ ಹುದ್ದೆಯನ್ನು ವಹಿಸಿಕೊಂಡಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅವರು ಮುಖ್ಯ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ದ್ರಾವಿಡ್ ಲಭ್ಯವಿಲ್ಲದಿದ್ದಾಗಲೂ ವಿವಿಎಸ್ ಲಕ್ಷ್ಮಣ್ ಅನೇಕ ಸರಣಿಗಳಲ್ಲಿ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
ಇದೀಗ ದ್ರಾವಿಡ್ ಅಧಿಕಾರಾವಧಿ ಕೊನೆಗೊಂಡಿದ್ದು, ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್ ಹುದ್ದೆ ಅಲಂಕರಿಸುವುದು ಬಹುತೇಕ ಖಚಿತವಾಗಿದ್ದು, ಲಕ್ಷ್ಮಣ್ ಡಿ.10 ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಮುಖ್ಯ ಕೋಚ್ ಆಗಿ ಮುನ್ನಡೆಸಲಿದ್ದಾರೆ ಎನ್ನಲಾಗುತ್ತಿದೆ.