ಸಮಗ್ರ ನ್ಯೂಸ್: ಬೆಂಗಳೂರು ಅರಮನೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಕಂಬಳಕ್ಕೆ ಉಪ್ಪಿನಂಗಡಿಯಿಂದ ಕಂಬಳ ಕೋಣಗಳನ್ನು ಬೀಳ್ಗೊಡಲಾಯಿತು. ನವಂಬರ್ 25 ಮತ್ತು 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ನಡೆಯಲಿದ್ದು, ಕರಾವಳಿಯಿಂದ ಸುಮಾರು 250ಕ್ಕೂ ಅಧಿಕ ಕೋಣಗಳ ಜೋಡಿ ಭಾಗವಹಿಸುವ ನಿರೀಕ್ಷೆ ಇದೆ.
ಈಗಾಗಲೇ ಕಂಬಳ ತಯಾರಿ ಕೊನೆಯ ಹಂತದಲ್ಲಿದ್ದು, ಇದೀಗ ಕಂಬಳ ಕೋಣಗಳು ಬೆಂಗಳೂರಿನತ್ತ ಹೊರಟಿವೆ. ಇಂದು ಉಪ್ಪಿನಂಗಡಿಯ ಪದವಿ ಕಾಲೇಜು ಮೈದಾನದಲ್ಲಿ ಬೆಂಗಳೂರಿಗೆ ಹೊರಟ ಕಂಬಳ ಕೋಣಗಳನ್ನು ನಿಲ್ಲಿಸಲಾಗಿತ್ತು. ಈ ವೇಳೆ ಎಲ್ಲಾ ಕಂಬಳ ಕೋಣಗಳಿಗೆ ದೃಢೀಕರಣ ಪತ್ರವನ್ನು ಪಶುಸಂಗೋಪನಾ ಇಲಾಖೆ ವೈದ್ಯರು ಸ್ಥಳದಲ್ಲೇ ನೀಡಿದರು.
ಮೈದಾನದಲ್ಲಿ ತುಳುನಾಡಿದ ಧ್ವಜ ನಿಶಾನೆ ತೋರಿದ ಬಳಿಕ ಕಂಬಳ ಕೋಣಗಳನ್ನು ತುಂಬಿಕೊಂಡ ಲಾರಿಗಳು ಬೆಂಗಳೂರಿನತ್ತ ಹೊರಟಿವೆ. ಕಂಬಳ ಕೋಣಗಳಿಗೆ ಬೇಕಾದ ನೀರು ಹಾಗು ಇತರ ವಸ್ತುಗಳನ್ನು ವಾಹನದಲ್ಲೇ ತುಂಬಿಸಿಕೊಳ್ಳಲಾಗಿದೆ. ಅಲ್ಲದೆ ಕಂಬಳ ಕೋಣಗಳ ಜೊತೆಗೆ ಅದರ ಮಾಲಕರು ಮತ್ತು ಪರಿಚಾರಕರ ದಂಡು ಕೂಡ ಬೆಂಗಳೂರಿಗೆ ಹೊರಟಿದ್ದಾರೆ.
ಉಪ್ಪಿನಂಗಡಿ-ಶಿರಾಡಿಘಾಟ್ ಮಾರ್ಗವಾಗಿ ಬೆಂಗಳೂರು ತಲುಪಲಿದ್ದು, ಮಧ್ಯಾಹ್ನ 2 ಗಂಟೆಗೆ ಹಾಸನ ತಲುಪಲಿರುವ ಕೋಣಗಳ ತಂಡ, ಹಾಸನದಲ್ಲಿ ಮಧ್ಯಾಹ್ನದ ಭೋಜನದ ಬಳಿಕ ಕೋಣಗಳಿಗೆ ವಿಶ್ರಾಂತಿ. ಬಳಿಕ ಹಾಸನ- ಚನ್ನಪಟ್ಟಣ ಮಾರ್ಗವಾಗಿ ಬೆಂಗಳೂರು ಅರಮನೆ ಮೈದಾನ ತಲುಪಲಿರುವ ಕೋಣಗಳ ತಂಡ , ರಾತ್ರಿ ಸುಮಾರು 11 ಗಂಟೆಗೆ ಕೋಣಗಳು ತಲುಪುವ ನಿರೀಕ್ಷೆ ಇದೆ.