ಸಮಗ್ರ ನ್ಯೂಸ್: ಹಿಂದೂ ಕಾರ್ಯಕರ್ತರ ಮೇಲೆ ಗಡಿಪಾರು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಮಂಗಳೂರು ಗುರುಪುರ ಮಠದ ವಜ್ರದೇಹಿ ಶ್ರೀ ಸುಳ್ಯದಲ್ಲಿ ಗುಡುಗಿದ್ದಾರೆ.
ಸುಳ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ, ಮಂಗಳೂರಿನ ಬಜರಂಗದಳದ ಕೆಲವು ಕಾರ್ಯಕರ್ತರನ್ನು ಗಡಿಪಾರು ಮಾಡಿರುವ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಕತ್ತಿನ ಸವಾಲೊಂದನ್ನು ಕೂಡಾ ಹಾಕಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ತಾಕತ್ತಿದ್ರೆ ನನ್ನನ್ನು ಗಡಿಪಾರು ಮಾಡಲಿ. ಜಮೀರ್ ಅಹ್ಮದ್ ಖಾನ್ ಅವರನ್ನು ಗಡಿಪಾರು ಮಾಡಲಿ. ಜಮೀರ್ ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು. ಆ ತಾಕತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಇದೆಯೇ ಎಂದು ಹೇಳಿದ್ದಾರೆ.
‘ಗೋವುಗಳ ರಕ್ಷಣೆ ಮಾಡಿದ್ದಕ್ಕಾಗಿ ಹಿಂದುತ್ವವಾದಿ ಕಾರ್ಯಕರ್ತರ ವಿರುದ್ಧ 10-20 ಪ್ರಕರಣ ದಾಖಲಾಗಿವೆ. ಸರ್ಕಾರಕ್ಕೆ ನಮ್ಮ ಮಕ್ಕಳನ್ನು ಕಂಡರೆ ಭಯ. ಹಾಗಾಗಿ, ಹಿಂದು ಕಾರ್ಯಕರ್ತ ಲತೇಶ್ ನನ್ನು ಗಡಿಪಾರು ಮಾಡಿದ್ದಾರೆ. ಜಿಲ್ಲಾಡಳಿತಕ್ಕೆ ತಾಕತ್ತಿದ್ರೆ ನನ್ನನ್ನ ಗಡಿಪಾರು ಮಾಡಲಿ’ ಎಂದು ಹೇಳಿದ್ದಾರೆ.
ಕೋಮು ಗಲಭೆ, ಅನೈತಿಕ ಪೊಲೀಸ್ ಗಿರಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಬಜರಂಗದಳದ ಹಲವು ಕಾರ್ಯಕರ್ತರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಆ ಸಂಬಂಧ ಬಜರಂಗದಳದ ಕಾರ್ಯಕರ್ತ ಲತೇಶ್ ಗುಂಡ್ಯ, ಪ್ರಜ್ವಲ್, ನಿಶಾಂತ್, ಪ್ರದೀಪ್ ಮತ್ತು ದಿನೇಶ್‌ಗೆ ನೋಟಿಸ್ ಜಾರಿ ಮಾಡಿದೆ. ಸಾಮಾಜಿಕ ಅಶಾಂತಿ ಕಾರಣರಾಗಿರುವ ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು. ಈ ಬಗ್ಗೆ ಕಾರಣ ನೀಡಬೇಕು ಮತ್ತು ನವೆಂಬರ್ 22ರಂದು ಪುತ್ತೂರು ಸಹಾಯಕ ಆಯುಕ್ತರ ಎದುರು ಹಾಜರಾಗಲು ನೋಟಿಸ್‌ನಲ್ಲಿ ಹೇಳಲಾಗಿತ್ತು.