ಸಮಗ್ರ ನ್ಯೂಸ್: ರಾಜಧಾನಿಯ ನಾಗರಿಕರ ಮನೆ ಬಾಗಿಲಿಗೆ ತಾಜಾ ಮೀನು ಒದಗಿಸುವ ಮತ್ತು ಮೀನುಗಾರಿಕೆ ಕ್ಷೇತ್ರದ ಮಾರುಕಟ್ಟೆಯ ಸಮಸ್ಯೆಗೆ ಪರಿಹಾರ ಒದಗಿಸಲು ಕರ್ನಾಟಕ ರಾಜ್ಯ ಸರ್ಕಾರ ಮತ್ಸ್ಯ ವಾಹಿನಿ ಯೋಜನೆ ಪ್ರಾರಂಭಿಸಿದೆ. 150 ಮತ್ಸ್ಯ ವಾಹಿನಿ ವಾಹನಗಳಿಗೆ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ಇದು ಬೆಂಗಳೂರಿನ ಮನೆಗಳಿಗೆ ತಾಜಾ ಮೀನುಗಳನ್ನು ಒದಗಿಸಲಿದೆ.
ವಿಧಾನಸೌಧದಲ್ಲಿ ನಡೆದ ವಿಶ್ವ ಮೀನುಗಾರಿಕಾ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಗೆ ಚಾಲನೆ ನೀಡಿದ್ದಾರೆ. 150 ಮತ್ಸ್ಯವಾಹಿನಿ ವಾಹನಗಳು ಬೆಂಗಳೂರು ನಗರದಾದ್ಯಂತ ಸಂಚರಿಸಲಿದ್ದು, ಬೆಳಗ್ಗಿನ ಹೊತ್ತು ತಾಜಾ ಮೀನುಗಳನ್ನು ಮತ್ತು ಸಂಜೆ ಮೀನಿನ ಖಾದ್ಯಗಳನ್ನು ಮಾರಾಟ ಮಾಡಲಾಗುತ್ತದೆ.
ಸರ್ಕಾರದ ವತಿಯಿಂದ ವಾಹನ ಭದ್ರತಾ ಠೇವಣಿ 2 ಲಕ್ಷ ಹಾಗೂ ಮಾಸಿಕ 3000 ರೂ ಬಾಡಿಗೆಯನ್ನು ನೀಡಲಾಗುತ್ತದೆ, ಬ್ಯಾಟರಿ ಚಾಲಿತ ತ್ರಿಚಕ್ರ ವಾಹನದಲ್ಲಿ ಮೀನಿನ ಖಾದ್ಯಗಳನ್ನು ಮಾಡುವ ವ್ಯವಸ್ಥೆ ಕೂಡ ಇರಲಿದೆ. ಭವಿಷ್ಯದಲ್ಲಿ ಇತರೆ ಜಿಲ್ಲೆಗಳಿಗೂ ಯೋಜನೆಯನ್ನು ವಿಸ್ತರಿಸುವ ಸಾಧ್ಯತೆ ಇದೆ.