ಜಗತ್ತಿನಾದ್ಯಂತ ಚರ್ಚೆಯಲ್ಲಿರುವ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ವಿಚಾರ ಇದೀಗ ಥಾಯ್ಲೆಂಡ್‍ನಲ್ಲಿ ಮುಂಚೂಣಿಗೆ ಬಂದಿದ್ದು, ಸಲಿಂಗ ವಿವಾಹಕ್ಕೆ ಒಪ್ಪಿಗೆ ನೀಡುವ ಹಿನ್ನಲೆಯಲ್ಲಿ ನಾಗರಿಕ ಸಂಹಿತೆ ಕಾಯ್ದೆಯ ತಿದ್ದುಪಡಿಗೆ ಥಾಯ್ಲೆಂಡ್ ಸರ್ಕಾರ ಒಪ್ಪಿಗೆ ನೀಡಿದೆ. ಇದು ಕಾನೂನಾಗಿ ಪರಿವರ್ತನೆಯಾದಲ್ಲಿ, ನೇಪಾಳ ಮತ್ತು ತೈವಾನ್ ದೇಶಗಳ ನಂತರ ಸಲಿಂಗ ವಿವಾಹಕ್ಕೆ ಅನುಮತಿ ನೀಡಿದ ಮೂರನೇ ದೇಶವಾಗಿ ಥಾಯ್ಲೆಂಡ್ ಗುರುತಿಸಲ್ಪಡಲಿದೆ.
ಈ ತಿದ್ದುಪಡಿಯು ಥಾಯ್ಲೆಂಡ್‍ನಲ್ಲಿ ಇನ್ನು ಮುಂದೆ ಸಲಿಂಗ ದಂಪತಿಗಳಿಗೆ ಪತಿ ಮತ್ತು ಪತ್ನಿ ಎಂಬ ಪದಗಳಿಗೆ ಬದಲಾಗಿ ವ್ಯಕ್ತಿಗಳು ಮತ್ತು ವಿವಾಹದ ಪಾಲುದಾರರು ಎಂದು ಬಳಸಲು ನಿರ್ಧರಿಸಲಾಗಿದೆ. ಭಿನ್ನಲಿಂಗೀಯ ದಂಪತಿಗಳು ಹೊಂದಿರುವ ಹಕ್ಕುಗಳನ್ನು ಇವರು ಕೂಡ ಹೊಂದಿರುತ್ತಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಥಾಯ್ಲೆಂಡ್ ಪ್ರಧಾನಿ ಸ್ರೆಥಾ ಥವಿಸಿನ್, ಮುಂದಿನ ತಿಂಗಳು ನಡೆಯುವ ಸಂಸತ್ ಅಧಿವೇಶನದಲ್ಲಿ ಕರಡು ಮಸೂದೆ ಅಂಗೀಕಾರವಾಗುವ ಸಾಧ್ಯತೆ ಇದ್ದು, ನಂತರ ರಾಜ ಮಹಾ ವಜಿರಾಲಾಂಗ್ ಕಾರ್ನ್ ಅವರ ಬಳಿ ಹೋಗಲಿದೆ. ರಾಜನ ಅಂಕಿತ ಬಿದ್ದ ನಂತರ ಅದು ಕಾನೂನಾಗಿ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.