ಸಮಗ್ರ ನ್ಯೂಸ್: ಗ್ರಾಹಕರ ಪರವಾಗಿ ನೀಡಿದ್ದ ಆದೇಶವನ್ನು ಪಾಲಿಸದ ಐವರು ಬಿಲ್ಡರ್‌ಗಳು ತಲಾ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕು ಮತ್ತು ತಲಾ ₹ 1 ಲಕ್ಷ ದಂಡ ಪಾವತಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶ ಮಾಡಿದೆ.
ಮಂಗಳೂರು ನಗರದ ಮಾರಿಯನ್ ಇನ್ಫ್ರಾಸ್ಟ್ರಕ್ಚರ್ಸ್ ಸಂಸ್ಥೆಯ ಪಾಲುದಾರರಾಗಿರುವ ಉಜ್ವಲ ಡಿಸೋಜ ಮತ್ತು ನವೀನ್ ಕಾರ್ಡೋಜ ಹಾಗೂ ಅವರೊಂದಿಗೆ ಅಭಿವೃದ್ಧಿ ಪಾಲುದಾರಾರಾಗಿರುವ ವಿಲಿಯಂ ಸಲ್ದಾನ, ಗಾಯತ್ರಿ ಪೈ ಬಿ., ಮತ್ತು ಲ್ಯೂಸಿ ಸಲ್ದಾನ ಶಿಕ್ಷೆಗೆ ಒಳಗಾದ ಆರೋಪಿಗಳು.
ಆರೋಪಿಗಳು 2013ರಲ್ಲಿ ನಗರದ ಗುಜ್ಜರೆ ಕೆರೆಯಲ್ಲಿ ಬಹುಮಹಡಿ ವಸತಿ ಕಟ್ಟಡ ನಿರ್ಮಿಸಿ ಮಾರಾಟ ಮಾಡುತ್ತಿದ್ದರು. ಆಗ ಲವೀನಾ ನರೋನ್ಹ ಅವರು ಆ ಕಟ್ಟಡದಲ್ಲಿ ಒಂದು ಫ್ಲಾಟ್ ಅನ್ನುಕಾರು ನಿಲುಗಡೆ ಜಾಗದ ಸಹಿತ ₹ 40 ಲಕ್ಷಕ್ಕೆ ಖರೀದಿಸಿದ್ದರು. ಆದರೆ, ಮಾರಾಟಕ್ಕೆ ಸಂಬಂಧಿಸಿದ ಕರಾರು ಪತ್ರದಲ್ಲಿ ಉಲ್ಲೇಖಿಸಿದಂತೆ ಲವೀನಾ ಅವರಿಗೆ ಕಾರು ನಿಲುಗಡೆಗೆ ಬಿಲ್ಡರ್‌ಗಳು ಸ್ಥಳವನ್ನು ನೀಡಿರಲಿಲ್ಲ. ಈ ಕುರಿತು ಆರೋಪಿಗಳನ್ನು ವಿನಂತಿಸಿದಾಗ, ಕಾರು ನಿಲುಗಡೆಗೆ ಜಾಗ ನೀಡಲು ನಿರಾಕರಿಸಿದ್ದರು. ಲವೀನಾ ಅವರು ನೋಟಿಸ್ ನೀಡಿದರೂ ಆರೋಪಿಗಳು ಸ್ಪಂದಿಸಲಿಲ್ಲ.
ಲವೀನಾ ಅವರು 2014ರಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆಯೋಗವು 2017ರ ಜೂನ್ 24ರಂದು ದೂರುದಾರರ ಪರವಾಗಿ ಆದೇಶ ಮಾಡಿತ್ತು. ಸೇವಾ ನ್ಯೂನತೆ ಮಾಡಿರುವ ಆರೋಪಿಗಳು ಲವೀನಾ ಅವರಿಗೆ ಕಾರು ನಿಲುಗಡೆಗೆ ಸ್ಥಳವನ್ನು ನೀಡಬೇಕು. ಅಲ್ಲದೇ ₹ 50 ಸಾವಿರ ಪರಿಹಾರ ಹಾಗೂ ಪ್ರಕರಣ ಖರ್ಚಿಗೆ ₹ 10ಸಾವಿರ ನೀಡಬೇಕು ಎಂದು ಆದೇಶ ಮಾಡಿತ್ತು.
ಈ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ರಾಜ್ಯ ಆಯೋಗವು ಈ ಮೇಲ್ಮನವಿಯನ್ನು ತಿರಸ್ಕರಿಸಿ ಜಿಲ್ಲಾ ಆಯೋಗದ ಆದೇಶವನ್ನು ಎತ್ತಿ ಹಿಡಿದಿತ್ತು. ಆ ಬಳಿಕವೂ ಆರೋಪಿಗಳು ಕಾರು ನಿಲುಗಡೆಗೆ ಜಾಗ ಕೊಡದ ಕಾರಣ ಲವೀನಾ ಅವರು 2022ರ ಸೆಪ್ಟೆಂಬರ್‌ನಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಆದೇಶ ಉಲ್ಲಂಘನೆ ಸಂಬಂಧ ದೂರು ನೀಡಿದ್ದರು. ಇದನ್ನು ಸ್ವೀಕರಿಸಿದ ಆಯೋಗವು ಆರೋಪಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದರೆ ಮತ್ತೆ ಆರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು ಎಂದೂ ಆದೇಶ ಮಾಡಿದೆ.