ಮಂಗಳೂರು: ನ್ಯಾಪ್ಟಾಲ್ ಸಂಸ್ಥೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಅಂಚೆ ಮೂಲಕ ಸ್ಕ್ರ‍್ಯಾಚ್ ಕಾರ್ಡ್ ಕಳುಹಿಸಿ 12 ಲಕ್ಷ. ರೂ ಬಂದಿದೆ ಎಂದು ಹೇಳಿ ಲಕ್ಷ ಲಕ್ಷ ರೂ. ಪಡೆದು ವಂಚನೆ ಎಸಗಿರುವ ಘಟನೆ ನಡೆದಿದೆ.
ಮಂಗಳೂರು ಮೂಲದ ವ್ಯಕ್ತಿಯೋರ್ವರಿಗೆ ನ್ಯಾಪ್ಟಾಲ್ ಸಂಸ್ಥೆಯಿಂದದ ರಿಜಿಸ್ಟರ್ ಪೋಸ್ಟ್ ಬಂದಿತ್ತು. ಅದನ್ನು ತೆರೆದು ನೋಡಿದ ವೇಳೆ ಅದರಲ್ಲಿ ಸ್ಕ್ರ‍್ಯಾಚ್ ಕಾರ್ಡ್ ಹಾಗೂ ಪತ್ರ ಇತ್ತು. ಅಲ್ಲದೇ, 12 ಲಕ್ಷ ರೂ. ಬಹುಮಾನ ಬಂದಿರುವುದಾಗಿ ನಮೂದಿಸಲಾಗಿತ್ತು.
ರಿಜಿಸ್ಟರ್ ಪೋಸ್ಟ್ನಲ್ಲಿದ್ದ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ ಸಂದರ್ಭ ಬಹುಮಾನ ಮೊತ್ತ ಪಡೆಯಲು ಬ್ಯಾಂಕ್ ಖಾತೆ ವಿವರ ಸೇರಿದಂತೆ ವಿಳಾಸವನ್ನು ವಾಟ್ಸ್ಯಾಪ್ ಮೂಲಕ ಕಳುಹಿಸುವಂತೆ ಹೇಳಿದ್ದರು. ಮಾಹಿತಿ ಕಳುಹಿಸಿಕೊಟ್ಟ ನಂತರ ಪ್ರದೀಪ್ ಪೂಜಾರಿ ಎಂದು ಪರಿಚಯಿಸಿಕೊಂಡು ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ ಬಹುಮಾನದ ಮೊತ್ತವನ್ನು ಪಡೆದುಕೊಳ್ಳಲು 46,000 ರೂ. ಅನ್ನು ನೀಡಬೇಕು ಹಾಗೂ ಶುಲ್ಕಗಳನ್ನು ಪಾವತಿಸಬೇಕು ಎಂದು ತಿಳಿಸಿದ.
ನಂತರ ಅಪರಿಚಿತ ವ್ಯಕ್ತಿ ಹಂತ ಹಂತವಾಗಿ 2020ರ ಡಿಸೆಂಬರ್ 9ರಿಂದ 2021ರ ಮಾರ್ಚ್ 12ರ ಅವಧಿಯಲ್ಲಿ ಸುಮಾರು 7,85,800 ರೂ. ಗಳನ್ನು ಪಡೆದು ವಂಚಿಸಿದ್ದಾನೆ ಎಂದು ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ.