ವಿಜಯವಾಡ: ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ಅತ್ತೆ-ಸೊಸೆ ಜಗಳ ವಿಕೋಪಕ್ಕೆ ತಿರುಗಿದ್ದು, ಕುದಿಯುವ ಎಣ್ಣೆಯನ್ನು ಅತ್ತೆಯ ಮೇಲೆ ಸೊಸೆ ಎರಚಿರುವ ಘಟನೆ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಅತ್ತೆಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸರ್ಕಾರದಿಂದ ಬಂದ ಹಣದ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿದೆ. ಜಗನ್ ಚೆಯುತಾ ಯೋಜನೆಯಡಿ ಹಣ ಬಂದಿತ್ತು. ಹಣ ಹಂಚಿಕೆ ವಿಚಾರದಲ್ಲಿ ಅತ್ತೆ-ಸೊಸೆ ಮಧ್ಯೆ ವಾಗ್ವಾನ ನಡೆದಿದೆ. ಅತ್ತೆಯ ಮಾತುಗಳಿಂದ ಕುಪಿತಗೊಂಡ ಸೊಸೆ ಈ ಕೃತ್ಯವೆಸಗಿದ್ದಾಳೆ.
ಗುಡಿವಾಡದ ನಿವಾಸಿಗಳಾದ ಅತ್ತೆ ಲಕ್ಷ್ಮಿ(55) ಹಾಗೂ ಸೊಸೆ ಸ್ವರೂಪ(25) ಮಧ್ಯೆ ಹಣದ ವಿಚಾರವಾಗಿ ಗಲಾಟೆ ನಡೆದಿದೆ. ಅಲ್ಲಿನ ರಾಜ್ಯ ಸರ್ಕಾರದ ಜಗನ್ ಚೆಯುತಾ ಯೋಜನೆಗೆ ಅತ್ತೆ ಲಕ್ಷ್ಮಿ ಹೆಸರು ನೊಂದಾಯಿಸಿದ್ದರು. ಸ್ಕೀಮ್ನಲ್ಲಿ 18 ಸಾವಿರ ರೂಪಾಯಿ ಬಂದಿತ್ತು. ಇದನ್ನು ತನಗೆ ಕೊಡುವಂತೆ ಸೊಸೆ ಸ್ವರೂಪ ತಗಾದೆ ತೆಗೆದಿದ್ದಳು. ಹಣ ನೀಡಲು ನಿರಾಕರಿಸಿದ ಅತ್ತೆ ಜೊತೆ ಸೊಸೆ ಬರೋಬ್ಬರಿ 2 ಗಂಟೆಗಳ ಕಾಲ ಜಗಳ ಕಾದಿದ್ದಾಳೆ.
ಜಗಳದ ಬಳಿಕ ಅತ್ತೆ ಲಕ್ಷ್ಮಿ ಮಲಗಲು ತೆರಳಿದ್ದಾರೆ. ವಾಗ್ವಾದದಿಂದ ಉಗ್ರ ರೂಪ ತಳೆದಿದ್ದ ಸೊಸೆ ಅಡುಗೆ ಮನೆಗೆ ತೆರಳಿ ಎಣ್ಣೆಯನ್ನು ಬಿಸಿ ಮಾಡಿದ್ದಾಳೆ. ಕುದಿಯುತ್ತಿದ್ದ ಎಣ್ಣೆಯನ್ನು ತಂದು ಮಲಗಿದ್ದ ಅತ್ತೆ ಮೇಲೆ ಸುರಿದಿದ್ದಾಳೆ. ಅತ್ತೆ ಲಕ್ಷ್ಮಿಯ ಮುಖ, ಭುಜ ಹಾಗೂ ಕೈಗಳ ಮೇಲೆ ಎಣ್ಣೆ ಬಿದ್ದು ಗಾಯಗಳಾಗಿವೆ. ಭಯಾನಕವಾಗಿ ಕಿರುಚಿಕೊಂಡ ಅತ್ತೆ ಲಕ್ಷ್ಮಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅತ್ತೆ ಲಕ್ಷ್ಮಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದೇಹದ ಶೇ.30ರಷ್ಟು ಭಾಗ ಸುಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರು ಸೊಸೆ ಸ್ವರೂಪ ಹಾಗೂ ಮಗ ಶಿವನಾರಾಯಣ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.