ಸಮಗ್ರ ನ್ಯೂಸ್: ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣ ಇಂದು ನಡೆಯಲಿರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ಫೈನಲ್ಸ್ಗೆ ವರ್ಣಮಯವಾಗಿ ಸಜ್ಜಾಗಿದೆ. ಪಂದ್ಯಾವಳಿಯ ಎಲ್ಲ ಸವಾಲಿನ ಪಂದ್ಯಗಳನ್ನು ಸಮರ್ಥವಾಗಿ ಎದುರಿಸಿ ಅಂತಿಮ ಹಂತಕ್ಕೆ ತಲುಪಿರುವ ಎರಡು ಬಲಿಷ್ಠ ತಂಡಗಳಾದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯವೀಕ್ಷಣೆಗೆ ಇಡೀ ದೇಶವೇ ಕಾತುರದಿಂದ ಎದುರು ನೋಡುತ್ತಿದೆ.
ಅಹ್ಮದಾಬಾದ್ ಕ್ರೀಡಾಂಗಣದಲ್ಲಿ ಅಂದಾಜು 1 ಲಕ್ಷದ 30 ಸಾವಿರ ಕ್ರೀಡಾಭಿಮಾನಿಗಳು ಹಾಗೂ ವಿಶ್ವಾದ್ಯಂತ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳು ನಾಳೆ ನಡೆಯುವ ಐತಿಹಾಸಿಕ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಉಪಪ್ರಧಾನಿ ರಿಚರ್ಡ್ ಮಾರ್ಲ್ಸ್, ಕ್ರೀಡಾರಂಗದ ದಿಗ್ಗಜರು ಪಂದ್ಯ ವೀಕ್ಷಿಸುವ ನಿರೀಕ್ಷೆಯಿದ್ದು, ಕ್ರೀಡಾಂಗಣ ಹಾಗೂ ಸುತ್ತಮುತ್ತ ಭಾರೀ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಇಂದು ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಈ ಟೂರ್ನಿಯಲ್ಲಿ ಇದುವರೆಗೆ ಆಡಿರುವ ಎಲ್ಲ 10 ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ತಂಡ ವಿಶ್ವಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ವಿಶ್ವಕಪ್ ಫೈನಲ್ ಪಂದ್ಯದ ನೇರ ಪ್ರಸಾರಕ್ಕೆ ದೇಶದ ಹಲವೆಡೆ ಹೋಟೆಲ್ಗಳು, ಕ್ರೀಡಾಂಗಣಗಳು, ಕ್ಲಬ್ಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದಲೂ ವಿಶೇಷ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇಡೀ ಭಾರತವೇ ಟೀಮ್ ಇಂಡಿಯಾ ವಿಶ್ವಕಪ್ ಎತ್ತಿ ಹಿಡಿಯುವುದನ್ನು ನೋಡಲು ಕಾದು ಕುಳಿತಿದೆ. ಅಭಿಮಾನಿಗಳಂತು ದೊಡ್ಡ ಸಂಖ್ಯೆಯಲ್ಲಿ ಪಂದ್ಯ ವೀಕ್ಷಿಸಲು ತೆರಳುತ್ತಿದ್ದಾರೆ. ವಿಶ್ವಕಪ್ ಫೈನಲ್ ಕ್ರೇಜ್ ಎಷ್ಟಿದೆ ಎಂದರೆ ರಾತ್ರಿ 1 ಗಂಟೆಯ ಹೊತ್ತಿಗೆನೇ ನರೇಂದ್ರ ಮೋದಿ ಸ್ಟೇಡಿಯಂ ಬಳಿ ಫ್ಯಾನ್ಸ್ ಬಂದು ಕುಳಿತಿದ್ದಾರೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಹೌಸ್ಫುಲ್ ಆಗುವುದು ಖಚಿತವಾಗಿದ್ದು, ಟೀಮ್ ಇಂಡಿಯಾಕ್ಕೆ ದೊಡ್ಡ ಮಟ್ಟದ ಬೆಂಬಲ ಸಿಗಲಿದೆ. ಸ್ಟೇಡಿಯಂ ಹೊರಗಡೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ. ಭಾರತದ ಟೀ-ಶರ್ಟ್ ದಾಖಲೆ ಮಟ್ಟದಲ್ಲಿ ಸೇಲ್ ಆಗಿದೆ.