ಸಮಗ್ರ ನ್ಯೂಸ್: ‘ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ (ಪೊಕ್ಸೊ) ಜಿಲ್ಲೆಯ ಠಾಣೆಯೊಂದರಲ್ಲಿ ದಾಖಲಾದ ಪ್ರಕರಣದಲ್ಲಿ ಸಂತ್ರಸ್ತೆಯು ತನ್ನ ಮೊದಲ ಹೇಳಿಕೆ ನೀಡಿದಾಗ ಹೆಸರಿಸಿದ ಆರೋಪಿ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಈ ಪ್ರಕರಣದ ತನಿಖೆಯನ್ನು ದಾರಿತಪ್ಪಿಸಲಾಗುತ್ತಿದೆ’ ಎಂದು ಗಿರೀಶ್ ಮಟ್ಟಣ್ಣನವರ್ ಆರೋಪಿಸಿದರು.
‘ಬಾಲಕಿಯನ್ನು ಆರೋಗ್ಯ ತಪಾಸಣೆಗಾಗಿ ಇಲ್ಲಿನ ಲೇಡಿಗೋಷನ್ ಆಸ್ಪತ್ರೆಗೆ ಕರೆತಂದಾಗ ಆಕೆ ಮೇಲೆ ನಡೆದ ಲೈಂಗಿಕ ದೌರ್ಜನ್ಯದಿಂದ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಆಸ್ಪತ್ರೆಯ ವೈದ್ಯರು ನೀಡಿದ ಮಾಹಿತಿ ಆಧಾರದಲ್ಲಿ ಜಿಲ್ಲೆಯ ಮಹಿಳಾ ಪಿಎಸ್‌ಐ ಒಬ್ಬರ ಸಮ್ಮುಖದಲ್ಲಿ ಸಂತ್ರಸ್ತ ಬಾಲಕಿ ಹೇಳಿಕೆ ನೀಡಿದ್ದು, ಆಗ ಆಕೆ ಕಲಿಯುವ ಶಾಲೆಯ ಸಿಬ್ಬಂದಿಯ ಹೆಸರು ಉಲ್ಲೇಖಿಸಿದ್ದಾಳೆ. ಆ ಆರೋಪಿಯನ್ನು ಪೊಲೀಸರು ವಿಚಾರಣೆಗೂ ಒಳಪಡಿಸಿ ನಂತರ ಬಿಟ್ಟುಕಳುಹಿಸಿದ್ದಾರೆ. ಬಳಿಕ ಈ ಪ್ರಕರಣದಲ್ಲಿ ಇನ್ನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ’ ಎಂದು ಆರೋಪಿಸಿದರು.
‘ಪೊಕ್ಸೊ ಪ್ರಕರಣದಲ್ಲಿ ಸಂತ್ರಸ್ತರಿಗೆ ಸ್ಥೈರ್ಯ ತುಂಬಲು ಹಾಗೂ ಅವರ ಮೇಲೆ ಒತ್ತಡ ಹಾಕುವುದನ್ನು ತಡೆಯಲು ರಕ್ಷಣಾ ಅಧಿಕಾರಿಯನ್ನು ನೇಮಿಸಬೇಕು. ನ್ಯಾಯಾಧೀಶರ ಮುಂದೆ ಸಂತ್ರಸ್ತೆ ಹೇಳಿಕೆ ದಾಖಲಿಸುವಾಗಲಾದರೂ ಆಕೆ ಯಾರ ಒತ್ತಡಕ್ಕೂ ಒಳಗಾಗದೇ ಹೇಳಿಕೆ ನೀಡುವಂತಹ ಮುಕ್ತ ವಾತಾವರಣ ಇರುವಂತೆ ನೋಡಿಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.
ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ‘ಇದೊಂದು ಪೊಕ್ಸೊ ಪ್ರಕರಣವಾಗಿದ್ದರಿಂದ ತನಿಖಾ ಹಂತದಲ್ಲಿ ಯಾವುದೇ ಹೇಳಿಕೆ ನೀಡಲು ಬಯಸುವುದಿಲ್ಲ. ಪೊಲೀಸರು ಯಾರ ಒತ್ತಡಕ್ಕೂ ಮಣಿದಿಲ್ಲ. ಅಷ್ಟಕ್ಕೂ ಈ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿ ಗರ್ಭಿಣಿ. ಆಕೆಯ ಭ್ರೂಣದ ಹಾಗೂ ಆರೋಪಿಯ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತದೆ. ಯಾರು ಆರೋಪಿ ಎಂಬುದು ಇದರಿಂದ ದೃಢಪಡಲಿದೆ. ಇಲ್ಲಿ ಯಾರ ಒತ್ತಡಕ್ಕೆ ಒಳಗಾಗುವ ಪ್ರಮೇಯವೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.