ಸಮಗ್ರ ನ್ಯೂಸ್: ವಿದ್ಯುತ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ವಿರುದ್ಧ FIR ದಾಖಲಾಗಿದೆ. ಬೆಸ್ಕಾಂ ಅಧಿಕಾರಿಯೊಬ್ಬರ ದೂರಿನ ಆಧಾರದಲ್ಲಿ ಜಯನಗರ ಬೆಸ್ಕಾಂ ಜಾಗೃತ ದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜೆಪಿ ನಗರ ನಿವಾಸಕ್ಕೆ ಎಚ್ಡಿ ಕುಮಾರಸ್ವಾಮಿ ಅವರು ವಿದ್ಯುತ್ ಅಲಂಕಾರ ಮಾಡಿದ್ದರು. ಇದಕ್ಕೆ ಕಂಬದಿಂದ ನೇರವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರು. ಇದು ಕಾನೂನು ಬಾಹಿರವಾಗಿದ್ದು, ಈ ಹಿನ್ನೆಲೆ 2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 135 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ವಿದ್ಯುತ್ ಕಳವು ಆರೋಪದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದರು ಹಾಗೂ ಪರಿಶೀಲನೆ ನಡೆಸಿದ್ದರು. ನಂತರ ಕೇಸ್ ದಾಖಲಾಗಿದೆ.
ಕಾಯ್ದೆಯಡಿ ದಂಡ ಕಟ್ಟುವುಕ್ಕೆ ಅಥವಾ 6 ತಿಂಗಳ ಜೈಲು ಶಿಕ್ಷೆ ವಿಧಿಸುವುದಕ್ಕೂ ಅವಕಾಶ ಇದೆ. ಸದ್ಯ ಸ್ವತಃ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ತಪ್ಪಾಗಿರುವುದನ್ನು ಒಪ್ಪಿಕೊಂಡಿರುವ ಕಾರಣಕ್ಕೆ ದಂಡದಲ್ಲಿಯೇ ಪ್ರಕರಣ ಮುಕ್ತಾಯವಾಗುವ ಸಾಧ್ಯತೆ ಇದೆ.