ಸಮಗ್ರ ನ್ಯೂಸ್: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡ ನೆದರ್ಲ್ಯಾಂಡ್ಸ್ ವಿರುದ್ದ 160 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಭಾರತದ ವಿರುದ್ದ ಹೋರಾಡಿದ ನೆದರ್ಲ್ಯಾಂಡ್ಸ್ ಸೋಲಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಬಲಿಷ್ಟ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶಗಳಿಗೆ ಸೋಲುಣಿಸಿದ್ದ ಡಚ್ ಪಡೆ ಈ ವಿಶ್ವಕಪ್ ನಲ್ಲಿ ಎಲ್ಲರ ಗಮನ ಸೆಳೆದಿತ್ತು.
ಭಾರತ ನೀಡಿದ ಕಠಿಣ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ತಂಡ ಆರಂಭಿಕ ಆಘಾತ ಎದುರಿಸಿತು. ಓಪನರ್ ವೆಸ್ಲಿ ಬ್ಯಾರಸಿ ಇನ್ನಿಂಗ್ಸ್ ನ ಎರಡನೇ ಓವರ್ ನಲ್ಲಿ 4 ರನ್ ಗೆ ಮುಹಮ್ಮದ್ ಸಿರಾಜ್ ಎಸೆತದಲ್ಲಿ ವಿಕೆಟ್ ಕಳೆದುಕೊಂಡ ಹೊರತಾಗಿಯೂ, ಜೊತೆಯಾದ ಓಡೌಡ್-ಅಕೆರ್ಮಾನ್ ಜೋಡಿ ಧನಾತ್ಮಕ ಬ್ಯಾಟಿಂಗ್ ಗೆ ಒತ್ತುನೀಡಿದರು. ಮ್ಯಾಕ್ಸ್ ಓಡೌಡ್ 30 ರನ್ ಬಾರಿಸಿದರೆ ಕಾಲಿನ್ ಅಕೆರ್ಮಾನ್ 35 ರನ್ ಪೇರಿಸಿ ಕ್ರಮವಾಗಿ ಜಡೇಜ ಹಾಗೂ ಕುಲ್ದೀಪ್ ಯಾದವ್ ಬೌಲಿಂಗ್ ನಲ್ಲಿ ವಿಕೆಟ್ ಕಳೆದುಕೊಂಡರು.
ವಿಶ್ವಕಪ್ 2023ರಲ್ಲಿ ಮೊದಲ ಬಾರಿ ಪೂರ್ಣ ಪ್ರಮಾಣದ ಓವರ್ ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ ನಾಯಕ ಸ್ಕಾಟ್ ಎಡ್ವಡ್ಸ್ ವಿಕೆಟ್ ಪಡೆದುಕೊಂಡು ಏಕದಿನ ವಿಶ್ವಕಪ್ ನಲ್ಲಿ ಮೊದಲ ವಿಕೆಟ್ ಪಡೆದು ಸಂಭ್ರಮಿಸಿದರು. ಇದಕ್ಕೂ ಮುನ್ನ ಬಾಂಗ್ಲಾ ವಿರುದ್ಧ ಕೊಹ್ಲಿ, ಹಾರ್ದಿಕ್ ಪಾಂಡ್ಯ ಗಾಯದ ಕಾರಣ ಅವರ ಓವರ್‌ನ ಉಳಿದ ಮೂರು ಬಾಲ್ ಪೂರ್ಣಗೊಳಿಸಿದ್ದರು. ಕೊಹ್ಲಿ ಜೊತೆ ರೋಹಿತ್ ಶರ್ಮಾ ಕೂಡ ಬೌಲಿಂಗ್ ಮಾಡಿ ವಿಕೆಟ್ ಪಡೆದು ಗಮನ ಸೆಳೆದರು. ಈ ಪಂದ್ಯದಲ್ಲಿ ಯುವ ಬ್ಯಾಟರ್ ಶುಭ್ ಮನ್ ಗಿಲ್ ಹಾಗೂ ಸೂರ್ಯ ಕುಮಾರ್ ಯಾದವ್ ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು.
ನೆದರ್ಲ್ಯಾಂಡ್ಸ್ ಪರ ಸೈಬ್ರಾಂಡ್ 45, ಬಾಸ್ ಡೆ ಲೀಡ್ 12, ವಾನ್ ಬೀಕ್ 16, ವಾನ್ ಡರ್ ಮರ್ವೆ 16 ಹಾಗೂ ಆರ್ಯನ್ ದತ್ 5, ವಾನ್ ಮೀಕರನ್ 3 ರನ್ ಗಳಿದರು. ಡಚ್ ಪರ ತೇಜಾ ನಿದಾಮರು 54 ರನ್ ಬಾರಿಸಿ ಗರಿಷ್ಟ ರನ್ ಸ್ಕೋರರ್ ಆದರು.
ಭಾರತದ ಪರ ಮುಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಹಾಗೂ ಜಡೇಜಾ 2 ವಿಕೆಟ್ ಪಡೆದುಕೊಂಡರೆ, ವಿರಾಟ್ ಕೊಹ್ಲಿ, ರೋಹಿತ್ ತಲಾ ಒಂದು ವಿಕೆಟ್ ಕಬಳಿಸಿದರು.