ಸಮಗ್ರ ನ್ಯೂಸ್: ಮಂಡ್ಯ ಪಟ್ಟಣದ ಹೊರವಲಯದ ಶ್ರೀರಂಗಪಟ್ಟಣ-ಜೇವರ್ಗಿ ರಾಜ್ಯ ಹೆದ್ದಾರಿ, ಬನಘಟ್ಟ ಗ್ರಾಮದ ಬಳಿ ಮಂಗಳವಾರ ಕಾರೊಂದು ವಿಶ್ವೇಶ್ವರಯ್ಯ ನಾಲೆಗೆ ಉರುಳಿ ಐವರು ಮೃತಪಟ್ಟಿದ್ದಾರೆ.
ತುಮಕೂರು ಜಿಲ್ಲೆ, ತಿಪಟೂರು ತಾಲ್ಲೂಕು, ನೊಣವಿನಕೆರೆ ಬಳಿಯ ಕೈದಾಳ ಗ್ರಾಮದ ಚಂದ್ರಪ್ಪ, ಕೃಷ್ಣಪ್ಪ, ಧನಂಜಯ, ಬಾಬು, ಜಯಣ್ಣ ಮೃತಪಟ್ಟವರು. ಅವರೆಲ್ಲರೂ ಸೋದರ ಸಂಬಂಧಿಗಳಾಗಿದ್ದು ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನೆಲೆಸಿದ್ದರು. ಮೈಸೂರಿನ ಬಿಳಿಕೆರೆಯಲ್ಲಿ ಮಂಗಳವಾರ ನಡೆದ ಸಂಬಂಧಿಕರ ಬೀಗರೂಟ ಮುಗಿಸಿಕೊಂಡು ಇಂಡಿಕಾ ವಿಸ್ಟಾ ಕಾರಿನಲ್ಲಿ ತಿಪಟೂರಿಗೆ ತೆರಳುತ್ತಿದ್ದರು.
ತಾಲ್ಲೂಕಿನ ಮಾಣಿಕನಹಳ್ಳಿಯ ಪ್ರಕಾಶ್ ಮೃತರ ಸಂಬಂಧಿಯಾಗಿದ್ದು, ಅವರ ಗುರುತು ಪತ್ತೆ ಮಾಡಿ ನಂತರ ಭದ್ರಾವತಿಯ ಅವರ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದರು.
ಪಾಂಡವಪುರ ಪಟ್ಟಣದಿಂದ ಹೆದ್ದಾರಿಗೆ ಸೇತುವೆ ಬಳಿ ತಿರುವು ಪಡೆಯುವಾಗ, ಎದುರಿನಿಂದ
ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಕಾರು ತುಂಬಿ ಹರಿಯುತ್ತಿದ್ದ ನಾಲೆಗೆ ಬಿತ್ತು. ಹೆದ್ದಾರಿ ವಿಸ್ತಾರವಾಗಿದ್ದರೂ ಸೇತುವೆ ಕಿರಿದಾಗಿದ್ದರಿಂದ ಅಪಘಾತ ನಡೆಯಿತು.
ಸೇತುವೆ ತೀರಾ ಕಿರಿದಾಗಿದ್ದು ಅಗಾಗ ಅಪಘಾತಗಳಾಗುತ್ತಿದ್ದವು. ಕಳೆದ ವಾರವಷ್ಟೇ ಲಾರಿಯೊಂದು ಇದೇ ಜಾಗದಲ್ಲಿ ನಾಲೆಗೆ ಬಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದ. ಸೇತುವೆ ಪಕ್ಕದಲ್ಲಿ ತಡೆಗೋಡೆಯೂ ಇಲ್ಲ. ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣ ಕಾರ್ಯ 8 ವರ್ಷವಾದರೂ ಪೂರ್ಣಗೊಂಡಿಲ್ಲ.
‘ಘಟನೆಗೆ ಕಿರಿದಾದ ಸೇತುವೆಯೇ ಕಾರಣ. ಲಾರಿ ಬಿದ್ದಾಗಲೇ ಕಾವೇರಿ ನೀರಾವರಿ ನಿಗಮ ಅಥವಾ ಲೋಕೋಪಯೋಗಿ ಇಲಾಖೆ ತಡೆಗೋಡೆ ನಿರ್ಮಿಸಿದ್ದರೆ ಅಪಘಾತ ಸಂಭವಿಸುತ್ತಿರಲಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಹೊಸ ಸೇತುವೆಯೂ ಪೂರ್ಣಗೊಂಡಿಲ್ಲ’ ಎಂದು ಸ್ಥಳೀಯರು ದೂರಿದ್ದಾರೆ.
ನೆಲಮಟ್ಟದಲ್ಲಿ ತುಂಬಿ ಹರಿಯುತ್ತಿದ್ದ ನೀರಿನಲ್ಲಿ ಕಾರು ಸಂಪೂರ್ಣವಾಗಿ ಮುಳುಗಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರು ಹುಡುಕಲು ಅರ್ಧಗಂಟೆಗೂ ಹೆಚ್ಚು ಕಾಲ ಹಿಡಿಯಿತು. ನಂತರ ಮೇಲೆತ್ತಿ ಪಟ್ಟಣದ ಸಾರ್ವಜನಿಕರ ಆಸ್ಪತ್ರೆಗೆ ಮೃತದೇಹ ಸಾಗಿಸುವಲ್ಲಿ ಎರಡೂವರೆ ಗಂಟೆಯಾಯಿತು.