ಸಮಗ್ರ ನ್ಯೂಸ್: ಕರ್ನಾಟಕ ಕರಾವಳಿಯ ಪ್ರಮುಖ ನಗರವಾದ ಮಂಗಳೂರಿಗೆ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಿಸಬೇಕು ಎಂಬ ಬೇಡಿಕೆ ಹಲವು ದಿನಗಳಿಂದ ಕೇಳಿ ಬರುತ್ತಿದೆ. ಈ ರೈಲು ನಿರ್ವಹಣೆ ಮಾಡಲು ಬೇಕಾದ ವ್ಯವಸ್ಥೆಗಳನ್ನು ಸಹ ಮಂಗಳೂರು ನಿಲ್ದಾಣದಲ್ಲಿ ಮಾಡಲಾಗುತ್ತಿದೆ.
ಕರಾವಳಿ ಭಾಗದ ಜನರ ಬೇಡಿಕೆ ಭಾರತೀಯ ರೈಲ್ವೆ ಒಪ್ಪಿಗೆ ನೀಡಿದೆ. ಶೀಘ್ರವೇ ಮಂಗಳೂರು ನಗರಕ್ಕೆ ವಂದೇ ಭಾರತ್ ರೈಲು ಸಂಪರ್ಕ ದೊರೆಯಲಿದೆ. ಈ ಕುರಿತು ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಸಂಸದರ ಟ್ವೀಟ್ ನಳಿನ್ ಕುಮಾರ್ ಕಟೀಲ್ ತಮ್ಮ ಟ್ವೀಟ್‌ನಲ್ಲಿ, ‘ಮಂಗಳೂರು – ಮಡಗಾಂ ವಂದೇ ಭಾರತ್ ರೈಲು ಓಡಾಟಕ್ಕೆ ಸರ್ವಸನ್ನದ್ಧವಾಗಿದ್ದು, ವೇಳಾಪಟ್ಟಿ ಯಾವುದೇ ಕ್ಷಣದಲ್ಲಿಯೂ ಬಿಡುಗಡೆಯಾಗಲಿದೆ’ ಎಂದು ಹೇಳಿದ್ದಾರೆ.
‘ಇನ್ನು ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲಿಗಾಗಿ ಮಾಡಿದ ಮನವಿ ಫಲಪ್ರದವಾಗಿದ್ದು, ಶೀಘ್ರದಲ್ಲಿ ಅದು ಕೂಡ ಈಡೇರಲಿದೆ. ಈ ಸಿಹಿಸುದ್ದಿಗಾಗಿ ಜಿಲ್ಲೆಯ ನಾಗರಿಕರ ಪರವಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದಗಳು’ ಎಂದು ಕಟೀಲ್ ಟ್ವೀಟ್ ಮಾಡಿದ್ದಾರೆ.
ಕೆಲವು ತಿಂಗಳ ಹಿಂದೆ ಪಾಲಕ್ಕಾಡ್ ರೈಲ್ವೆ ವಿಭಾಗ ಕೇರಳದಲ್ಲಿ ಸಂಚಾರ ನಡೆಸುವ ವಂದೇ ಭಾರತ್ ರೈಲನ್ನು ಮಂಗಳೂರು ತನಕ ವಿಸ್ತರಣೆ ಮಾಡಲು ಚಿಂತನೆ ನಡೆಸಿತ್ತು. ಅಲ್ಲದೇ ರೈಲ್ವೆ ಇಲಾಖೆಯ ಮುಂದೆ ಮಂಗಳೂರು-ಮಡಗಾಂವ್, ಮಂಗಳೂರು-ಎರ್ನಾಕುಲಂ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುವ ಪ್ರಸ್ತಾವನೆ ಇತ್ತು.
ಈಗ ಸಂಸದರು ಮಾಡಿರುವ ಟ್ವೀಟ್ ಅನ್ವಯ ಮಡಗಾಂವ್- ಮಂಗಳೂರು ನಡುವೆ ಹೊಸ ವಂದೇ ಭಾರತ್ ರೈಲು ಸಂಚಾರ ಶೀಘ್ರವೇ ಆರಂಭವಾಗಲಿದೆ. ಮಂಗಳೂರು- ಬೆಂಗಳೂರು ನಡುವೆ ವಂದೇ ಭಾರತ್ ರೈಲು ಓಡಿಸಬೇಕು ಎಂದು ಸಹ ಕರಾವಳಿ ಭಾಗದ ಜನರು ಬೇಡಿಕೆ ಇಟ್ಟಿದ್ದಾರೆ.