ಸಮಗ್ರ ನ್ಯೂಸ್: 11 ವರ್ಷಗಳ ಹಿಂದೆ ಕೊಲೆಯಾದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ಮಣ್ಣಸಂಕ ಎಂಬಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಗೀಡಾದ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಪ್ರಕರಣವನ್ನು ಮರುತನಿಖೆಗೆ ಒಳಪಡಿಸುವಂತೆ ಹೈಕೋರ್ಟ್ ಗೆ ಸಿಬಿಐ ಅಧಿಕಾರಿಗಳು ಮೇಲ್ಮನವಿ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ಆರೋಪಿ ಎಂದು ಗುರುತಿಸಲ್ಪಟ್ಟಿದ್ದ ಸಂತೋಷ್ ರಾವ್ ನಿರ್ದೋಷಿ ಎಂದು ತೀರ್ಪು ನೀಡಿದ ಹಲವು ತಿಂಗಳ ಬಳಿಕ ಇದೀಗ ಸಿಬಿಐ ಅಧಿಕಾರಿಗಳು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಆರೋಪಿ ಸಂತೋಷ್ ರಾವ್ ಗೆ ಸಾಕ್ಷ್ಯಧಾರ ಕೊರತೆಯಿಂದ ನಿರ್ದೋಷಿ ಎಂದು ತೀರ್ಪು ನೀಡಿದ್ದು ಇದೀಗ ನ.5 ಶನಿವಾರದಂದು ಸಿಬಿಐ ತನಿಖಾಧಿಕಾರಿಗಳು ಹೈ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಬಗ್ಗೆ ಕೆಲವೇ ದಿನಗಳಲ್ಲಿ ಹೈಕೋರ್ಟ್ ಪ್ರಕರಣ ದಾಖಲಿಸಿದ ದಾವೆಯ CC ಹೊರಡಿಸಲಿದೆ.
ರಾಜ್ಯಾದ್ಯಂತ ಸೌಜನ್ಯಳಿಗೆ ನ್ಯಾಯಕ್ಕಾಗಿ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳ ಈ ನಡೆ ಕುತೂಹಲ ಹುಟ್ಟಿಸಿದೆ. ಮರುತನಿಖೆಗೆ ಹೈಕೋರ್ಟ್ ಸಮ್ಮತಿಸಿದರೆ ಸೌಜನ್ಯ ಪರ ಹೋರಾಟಗಾರರ ಹೋರಾಟಕ್ಕೆ ನಿರ್ಬಂಧ ಹೇರಲಾಗುತ್ತದೆ. ಒಟ್ಟಾರೆ ಪ್ರಕರಣ ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.