ಸಮಗ್ರ ನ್ಯೂಸ್: ರಾಜ್ಯದ ವಿವಿಧೆಡೆ ಸಂಭವಿಸಿದ ಪಟಾಕಿ ದುರಂತಗಳ ಬಳಿಕ ರಾಜ್ಯ ಸರ್ಕಾರ ಪಟಾಕಿ ಮಾರಾಟ ಮತ್ತು ಬಳಕೆಗೆ ಕಠಿಣ ನಿಯಮ ಜಾರಿಗೊಳಿಸಿದೆ. ಈ ಬಾರಿಯ ದೀಪಾವಳಿಯಲ್ಲಿ ಪಟಾಕಿ ಅಬ್ಬರಕ್ಕೆ ಅಂಕುಶ ಹಾಕಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಹಾವೇರಿಯ ಆಲದಟ್ಟಿ ಪಟಾಕಿ ದುರಂತದಲ್ಲಿ ನಾಲ್ವರು ಮತ್ತು ಅತ್ತಿಬೆಲೆಯಲ್ಲಿನ ಪಟಾಕಿ ದುರುಂತದಲ್ಲಿ 17 ಜನ ಸಾವನ್ನಪ್ಪಿದ ಬಳಿಕ, ರಾಜ್ಯ ಸರ್ಕಾರ ಈ ಬಾರಿಯ ದೀಪಾವಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅಧಿಕೃತ ಪರ್ಮನೆಂಟ್ ಲೈಸೆನ್ಸ್ ಹೊಂದಿದವರು ಮಾತ್ರ ಪಟಾಕಿ ಮಾರುವುದಕ್ಕೆ ಅವಕಾಶ ನೀಡಿದೆ. ತಾತ್ಕಾಲಿಕ ಅನುಮತಿ ಪಡೆದು ಮೈದಾನಗಳಲ್ಲಿ ಪಟಾಕಿ ಅಂಗಡಿ ಹಾಕುತ್ತಿದ್ದವರಿಗೆ ಸರ್ಕಾರ ಅನುಮತಿ ನೀಡಿಲ್ಲ. ಕೇವಲ ಖಾಯಂ ಲೈಸೆನ್ಸ್ ಪಡೆದವರಿಗೆ ಮಾತ್ರ ಪಟಾಕಿ ಮಾರಲು ಅವಕಾಶ ನೀಡಿದೆ. ಮೈದಾನಗಳಲ್ಲಿ ಪಟಾಕಿ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ.
ಗ್ರೀನ್ ಪಟಾಕಿಗಳನ್ನು ಮಾರುವುದಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಪಟಾಕಿ ಮಳಿಗೆಗಳನ್ನ ಪರಿಶೀಲಿಸಿ, ಗ್ರೀನ್ ಪಟಾಕಿ ಹೊರತುಪಡಿಸಿ ಬೇರೆ ಪಟಾಕಿ ಇದ್ದರೇ ಮುಟ್ಟುಗೋಲು ಹಾಕಿಕೊಂಡು ಕ್ರಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಗ್ರೀನ್ ಪಟಾಕಿಗಳ ಪ್ಯಾಕೆಟ್ಗಳ ಮೇಲೆ ಚಿಹ್ನೆ ಇದ್ದು, ಕ್ಯುಆರ್ ಕೋಡ್ ಸಹ ಇರುತ್ತದೆ.
ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಹೊಡೆಯಲು ಅವಕಾಶ ನೀಡಲಾಗಿದೆ. ಮಕ್ಕಳು ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗದಂತೆ ಪಟಾಕಿ ಹೊಡೆಯಬೇಕು. ಒಂದು ವೇಳೆ ನಿಯಮ ಮೀರಿ ಅಕ್ರಮವಾಗಿ ಪಟಾಕಿ ಮಾರಿದರೇ ಅಥವಾ ಹೊಡೆದರೆ ಪ್ರಕರಣ ದಾಖಲಿಸಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಪೊಲೀಸ್ ಇಲಾಖೆ, ತಹಶೀಲ್ದಾರ್, ಪರಿಸರ ಇಲಾಖೆ, ಅಗ್ನಿಶಾಮಕ ಇಲಾಖೆಯ ಕಾರ್ಯಪಡೆ ರಚಿಸಿದೆ.
ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ನಿಷೇಧಿತ ಸ್ಥಳಗಳಲ್ಲಿ ಪಟಾಕಿ ಹೊಡೆಯುವಂತಿಲ್ಲ. ಇದನ್ನು ಎಲ್ಲಾ ಸ್ಥಳೀಯ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆಗಳು ಕಡ್ಡಾಯವಾಗಿ ಪಾಲಿಸಬೇಕು.
ನವೆಂಬರ್ 5 ರಿಂದ 20 ರ ವರೆಗೆ ನಿರಂತರ ವಾಯುಮಾಲಿನ್ಯ ಪರೀಕ್ಷೆ ಮಾಡಬೇಕು. ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಮಾಪನದ ಮೂಲಕ ಪರೀಕ್ಷೆ ಮಾಡಬೇಕು. ಹೊರ ರಾಜ್ಯದ ಅನಧಿಕೃತ ಪಟಾಕಿಗಳಿಗೆ ನಿಷೇಧ ವಿಧಿಸಲಾಗಿದೆ. ಆಯಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪೊಲೀಸರ ಮೂಲಕ ನಿಯಮ ಪಾಲನೆಯ ಬಗ್ಗೆ ಕ್ರಮ ವಹಿಸಬೇಕು ಎಂದು ಮಂಡಳಿ ತಿಳಿಸಿದೆ.