ಸಮಗ್ರ ನ್ಯೂಸ್: ಸರ್ಕಾರದ ಸಹಭಾಗಿತ್ವದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಪ್ರಕರಣಕ್ಕೆ ಸಂಭಂದಿಸಿದಂತೆ ಕೊಡಗು ಕಾಂಗ್ರೆಸ್ ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ಕೊಡಗು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ಬಿ.ಎನ್.ವೀಣಾ ರವರ ಮುಖೇನ ಜಿಲ್ಲಾಧಿಕಾರಿಗಳಿಗೆ ಮಡಿಕೇರಿ ನಗರ ಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಸಂಭಂದ ಪಟ್ಟ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಜಿಲ್ಲಾಡಳಿತ ಹಾಗೂ ಮಡಿಕೇರಿ ನಗರ ಸಭೆಯ ಸಹಯೋಗದಲ್ಲಿ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಅ. 16ರಿಂದ ಅ. 24ರವರೆಗೆ ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ನಿರ್ಮಿಸಲಾದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆದಿತ್ತು.
ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಆದ್ಯತಾ ಸೂಚಿ ಪಟ್ಟಿ ಅನ್ವಯ ಶಿಷ್ಟಾಚಾರ ಪಾಲನೆ ಮಾಡುವುದು ಕಡ್ಡಾಯವಾಗಿದೆ. ಆಹ್ವಾನ ಪತ್ರಿಕೆ ಮುದ್ರಿಸುವಾಗ ಆದ್ಯತೆ ಅನುಸಾರವಾಗಿ ಅತಿಥಿಗಳ ಗಣ್ಯರ ಹೆಸರನ್ನು ಕ್ರಮವಾಗಿ ನಮೂದಿಸುವುದು ನಿಯಮವಾಗಿದೆ.
ಆದರೆ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಭಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಶಿಷ್ಟಾಚಾರ) ಹೊರಡಿಸಿರುವ ಆದೇಶದನ್ವಯ ಕರ್ನಾಟಕ ರಾಜ್ಯದ ಆದ್ಯತಾ ಸೂಚಿ ಪಟ್ಟಿಯ ಅನುಚ್ಛೇದ 18ರ ಕ್ರಮದಲ್ಲಿ ಮುದ್ರಿತವಾಗಬೇಕಿದ್ದ ಶ್ರೀ ಎ.ಎಸ್.ಪೊನ್ನಣ್ಣ, ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು (ಸಂಪುಟ ದರ್ಜೆ) ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು, ರವರ ಹೆಸರನ್ನು ಆದ್ಯತಾ ಸೂಚಿ ಅನುಚ್ಛೇದ 21ರ ಕ್ರಮದಲ್ಲಿ ನಮೂದಿಸಿರುವ ಮಾನ್ಯ ಲೋಕ ಸಭಾ ಸದಸ್ಯ ಪ್ರತಾಪ ಸಿಂಹ, ಇವರ ನಂತರ ನಮೂದಿಸಲಾಗಿದೆ. ಇದು ಸರ್ಕಾರದ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆಯಾಗಿದೆ.
ಅಲ್ಲದೆ, ಕಾರ್ಯಕ್ರಮದ ಉದ್ಘಾಟನಾ ದಿನದ ಆಹ್ವಾನ ಪತ್ರಿಕೆ (ಅ.16), ದೈನಂದಿನ ಕಾರ್ಯಕ್ರಮದ ಆಹ್ವಾನ ಪತ್ರಿಕೆ (ಅ. 16ರಿಂದ ಅ. 22 ರವರೆಗೆ), ಆಯುಧ ಪೂಜೆ ಹಾಗೂ ವಿಜಯ ದಶಮಿಯ ಆಹ್ವಾನ ಪತ್ರಿಕೆ (ಅ. 23ರಿಂದ ಅ. 24 ರವರೆಗೆ) ಒಟ್ಟು ಮೂರು ಬಾರಿ ಸಭಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಅಧಿಕೃತವಾಗಿ ವಿತರಿಸಲಾಗಿದ್ದು, ಮೂರು ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರದ ಉಲ್ಲಂಘನೆಯಾಗಿರುವುದು ಕಂಡು ಬಂದಿದೆ.
ಉಲ್ಲೇಖಿಸಿದ್ದಾರೆ. ಇದೀಗ, ಇದು ಉದ್ದೇಶ ಪೂರ್ವಕವಾಗಿ ಮಾಡಿದ ಅಪರಾಧವೆಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆರೋಪಿಸಿ ತೆನ್ನಿರಾ ಮೈನಾ ಅವರು ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಭಂದಿಸಿದಂತೆ ಮಡಿಕೇರಿ ನಗರ ಸಭೆಯ ಆಧ್ಯಕ್ಷರು ಹಾಗೂ ಮಡಿಕೇರಿ ದಸರಾ ಸಮಿತಿಯ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಸಂಭಂದಿಸಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ಹಿತದೃಷ್ಟಿಯಿಂದ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು ಎಂದು ತೆನ್ನಿರಾ ಮೈನಾ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.