“ನಮಗೆ ನಿಮ್ಮ ಭಯವಿಲ್ಲ, ಅಥವಾ ಆರೋಪ ಮಾಡುತ್ತಿರುವವರ ಭಯವಿಲ್ಲ, ನನಗಿರುವಂತಹದ್ದು ಅಣ್ಣಪ್ಪ ಸ್ವಾಮಿ, ಧರ್ಮ ದೇವತೆಗಳ ಭಯ” ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನಡೆದ ಧರ್ಮ ಸಂರಕ್ಷಣಾ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಾನು ಕೋರ್ಟ್ ಗಳನ್ನು ಕೇಳಿ ಕೊಳ್ಳುತ್ತೇನೆ. ನೀವು ಏನು ಬೇಕಿದ್ದರೂ ತನಿಖೆ ಮಾಡಿ, ನಮಗೆ ಬಹಿರಂಗವಾಗಿ ಯಾರು ಏನು ಹೇಳುತ್ತಾರೆ. ಅವರು ಎಲ್ಲವನ್ನೂ ಸರ್ಕಾರಕ್ಕೆ ಒಪ್ಪಿಸಿ, ಕೋರ್ಟ್ ಗಳಿಗೆ ಒಪ್ಪಿಸಿ ಆದರೆ ಕಾನೂನು ಮೀರಿ ಮಾತನಾಡುವ ಮಾತುಗಳು ನಿಲ್ಲಬೇಕು’ ಎಂದು ಅವರು ಒತ್ತಾಯಿಸಿದರು.
‘ಹೃದಯದಲ್ಲಿ ನನಗೆ ಯಾವುದೇ ಕಲ್ಮಶ ಇಲ್ಲ, ನನ್ನ ಕುಟುಂಬಕ್ಕಿಲ್ಲ, ನಮ್ಮ ಸಂಬಂಧಿಕರಿಗಿಲ್ಲ, ನಾವೆಲ್ಲರೂ ನ್ಯಾಯದಿಂದಿದ್ದೇವೆ. ಯಾವುದೇ ಕಾರಣಕ್ಕೂ ನಮ್ಮಿಂದ ತಪ್ಪಾಗದಂತೆ ನಾವು ಎಚ್ಚರಿಕೆ ವಹಿಸಿದ್ದೇವೆ. ಯಾಕೆಂದ್ರೆ ನಾನು ಧರ್ಮ ದೇವತೆಗಳ ಮುಂದೆ ಹೋಗಿ ನಿಲ್ಲಬೇಕಾಗುತ್ತದೆ. ಅವರು ಹೇಳುತ್ತಾರೆ, ನಿಮ್ಮಿಂದ ತಿಳುವಳಿಕೆ ಇದ್ದು ತಪ್ಪಾಗಿದ್ದರೆ, ನಾವು ಕ್ಷಣಮಾತ್ರದಲ್ಲಿ ಶಿಕ್ಷೆ ಕೊಡುತ್ತೇವೆ. ಇಲ್ಲದಿದ್ದರೆ ವರ್ಷ ಕಾಯುತ್ತೇವೆ. ವಾರ 12 ವರ್ಷ ಕಾಯುತ್ತೇವೆ. ಬೆಳಗ್ಗೆ ಬಿತ್ತಿ ಸಂಜೆ ಕೊಯ್ದರಂತೆ ಎಂಬ ಅಪಕೀರ್ತಿ ಧರ್ಮಸ್ಥಳಕ್ಕೆ ಬೇಡ, ಎಂದು ಹೇಳಿದ್ದಾರೆ.
‘ಯಾವುದೇ ಹಿಂದೂ ಕ್ಷೇತ್ರಗಳಿಗೆ ಅವಮಾನವಾಗಬಾರದು, ಶಾಂತಿ ಪ್ರಿಯರಾದ ನಾವು ಶಾಂತವಾಗಿ ಕುಳಿತು ಕ್ಷೇತ್ರದ ಎಲ್ಲ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ಸರ್ಕಾರ ಯಾವತ್ತೂ ಕೂಡ ಕ್ಷೇತ್ರದ ರಕ್ಷಣೆಯನ್ನು ಮಾಡಬೇಕು. ನಮ್ಮಲ್ಲಿ ಯಾವುದೇ ಅಳುಕು ಇಲ್ಲ. ನಮಗೆ ನಿಮ್ಮ ಭಯವಿಲ್ಲ, ಎಂದರು.
‘ಒಂದು ದೇಶವನ್ನ ಹಾಳು ಮಾಡಬೇಕಾದ್ರೆ, ಆ ದೇಶದ ಸಂಸ್ಕೃತಿಯನ್ನ ನಾಶ ಮಾಡಿ, ಆ ದೇಶ ಸತ್ತೋಗುತ್ತೆ. ಯಾವುದೇ ಕಾರಣಕ್ಕೂ ದೇಶದ ಸಂಸ್ಕೃತಿಯನ್ನು ನಾಶ ಮಾಡಲು ಬಿಡಬೇಡಿ. ಯಾಕೆಂದ್ರೆ, ಇಂದು ನಮ್ಮ ಕ್ಷೇತ್ರಕ್ಕೆ ಬಂದ ಅಪಾಯ ಬೇರೆ ಕ್ಷೇತ್ರಗಳಿಗೂ ಬರಬಹುದು ಎಂದು ಅವರು ಹೇಳಿದರು.