ಶಿಖರ್ ಧವನ್ ನೇತೃತ್ವದ ಭಾರತೀಯ ಸೀಮಿತ ಓವರ್‌ಗಳ ತಂಡ ಸೋಮವಾರ ಸಂಜೆ ಶ್ರೀಲಂಕಾವನ್ನು ತಲುಪಿದೆ. ರಾಹುಲ್ ದ್ರಾವಿಡ್ ಕೋಚ್ ಆಗಿ ತೆರಳಿರುವ ಈ ತಂಡದಲ್ಲಿ ಯುವ ಆಟಗಾರರ ದಂಡೇ ಇದೆ. ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಲಂಕಾ ತಂಡವನ್ನು ಎದುರಿಸಲಿದೆ.
ಭಾರತ ತಂಡದ ಖಾಯಂ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿದ್ದು ಟೀಮ್ ಇಂಡಿಯಾ ತಂಡವನ್ನು ಟೆಸ್ಟ್ ಸರಣಿಯಲ್ಲಿ ಮುನ್ನಡೆಸಲಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ಇಂಗ್ಲೆಂಡ್ ವಿರುದ್ಧ ನಡೆಯಲಿದೆ. ಅದಕ್ಕೂ ಮುನ್ನ ಶಿಖರ್ ಧವನ್ ನೇತೃತ್ವದ ತಂಡ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗಲಿದೆ.
ಶ್ರೀಲಂಕಾ ವಿರುದ್ಧದ ಈ ಸೀಮಿತ ಓವರ್‌ಗಳ ಸರಣಿಗೆ ಭುವನೇಶ್ವರ್ ಕುಮಾರ್ ಉಪನಾಯಕನಾಗಿ ಸಾಥ್ ನೀಡಲಿದ್ದಾರೆ.
ಹಾರ್ದಿಕ್ ಪಾಂಡ್ಯ, ಕುಲ್‌ದೀಪ್ ಯಾದವ್, ಯುಜುವೇಂದ್ರ ಚಾಹಲ್ ಲಂಕಾ ವಿರುದ್ಧಧ ಸರಣಿಯಲ್ಲಿರುವ ಅನುಭವಿ ಸದಸ್ಯರಾಗಿದ್ದಾರೆ. ಇದೇ ಸಂದರ್ಭದಲ್ಲಿ ದೇವದತ್ ಪಡಿಕ್ಕಲ್, ಚೇತನ್ ಸಕಾರಿಯಾ, ಋತುರಾಜಹ್ ಗಾಯಕ್ವಾಡ್, ಪೃಥ್ವಿ ಶಾ, ನಿತೀಶ್ ರಾಣಾ, ಇಶಾನ್ ಕಿಶನ್ ಟೀಮ್ ಇಂಡಿಯಾ ತಂಡದಲ್ಲಿರುವ ಯುವ ಆಟಗಾರರಾಗಿದ್ದಾರೆ.