ಸಮಗ್ರ ನ್ಯೂಸ್: ರಾಜ್ಯದೆಲ್ಲೆಡೆ ಪಟಾಕಿ ಸಂಪೂರ್ಣ ನಿಷೇಧಿಸಲು ಚಿಂತನೆ ನಡೆದಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಇತ್ತೀಚೆಗೆ ಪಟಾಕಿ ದುರಂತ ಸಂಭವಿಸಿದ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ, ಪುರಸಭೆ ಅಧಿಕಾರಿಗಳ ಸಭೆ ನಡೆಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸಂಪೂರ್ಣವಾಗಿ ಪಟಾಕಿ ನಿಷೇಧಿಸಲು ಚಿಂತನೆ ನಡೆದಿದೆ. ಆದರೆ, ಬೆಂಗಳೂರಿನಲ್ಲಿ ಮಾತ್ರ ಪಟಾಕಿ ನಿಷೇಧಿಸಬೇಕೇ ಅಥವಾ ರಾಜ್ಯದಾದ್ಯಂತ ನಿಷೇಧಿಸಬೇಕೆ ಎನ್ನುವ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ದೆಹಲಿ ಮಾದರಿಯಲ್ಲಿ ಬೆಂಗಳೂರಿನಲ್ಲಿ ಮಾತ್ರ ಪಟಾಕಿ ನಿಷೇಧಿಸಿದರೆ ಎಷ್ಟರಮಟ್ಟಿಗೆ ಯಶಸ್ಸು ಕಾಣಲಿದೆ ಎನ್ನುವ ಬಗ್ಗೆ ಮಾಹಿತಿ ಪಡೆಯಲಾಗುವುದು. ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.