ದೆಹಲಿ: ಭಾರತದ ನಕ್ಷೆ ತೋರಿಸುವಲ್ಲಿ ಟ್ವಿಟ್ಟರ್ ಎಡವಿದ್ದು, ಜಮ್ಮು ಕಾಶ್ಮೀರಾ ಪ್ರತ್ಯೇಕ ರಾಜ್ಯ, ಲೇಹ್ ಚೀನಾದ ಭೂ ಭಾಗವೆಂದು ತೋರಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಇದರಿಂದ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ತನ್ನ ವೆಬ್‌ಸೈಟ್‌ನಲ್ಲಿ ಮತ್ತೊಮ್ಮೆ ಭಾರತದ ತಪ್ಪು ನಕ್ಷೆಯನ್ನು ತೋರಿಸಿದಂತಾಗಿದೆ. ಸದ್ಯ ಟ್ವಿಟ್ಟರ್ ನ ‘ಟ್ವೀಪ್ ಲೈಫ್’ ವಿಭಾಗದ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ದೇಶದಿಂದ ಬೇರ್ಪಟ್ಟಿದೆ ಎಂದು ತೋರಿಸುತ್ತಿದೆ. ಟ್ವಿಟರ್ ಭಾರತದ ತಪ್ಪು ನಕ್ಷೆಯನ್ನು ತೋರಿಸಿರುವುದು ಇದು ಮೊದಲಲ್ಲ. 2020 ರ ಅಕ್ಟೋಬರ್‌ನಲ್ಲಿ ಟ್ವಿಟರ್, ಲಡಾಕ್‌ನಲ್ಲಿರುವ ಭಾರತದ ಭೂಪ್ರದೇಶವಾದ ಲೇಹ್’ನ್ನು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಪಿಆರ್‌ಸಿ) ಯ ಭಾಗವಾಗಿ ಲೇಬಲ್ ಮಾಡಿತ್ತು. ಭಾರತದ ನಕ್ಷೆಯನ್ನು ತಪ್ಪಾಗಿ ನಿರೂಪಿಸಿರುವ ಬಗ್ಗೆ ಅಮೆರಿಕ ಮೂಲದ ವೇದಿಕೆಗೆ ಭಾರತ ಸರ್ಕಾರ ಎಚ್ಚರಿಕೆ ನೀಡಿತ್ತು. ಇಂತಹ ಎಡವಟ್ಟುಗಳು ಟ್ವಿಟರ್‌ಗೆ ಅಪಖ್ಯಾತಿಯನ್ನು ತಂದುಕೊಡುವುದಲ್ಲದೆ, ಮಧ್ಯವರ್ತಿಯಾಗಿ ಅದರ ತಟಸ್ಥತೆ ಮತ್ತು ನ್ಯಾಯಸಮ್ಮತತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಭಾರತದಲ್ಲಿ ಸರ್ಕಾರದ ಹೊಸ ನಿಯಮಗಳನ್ನು ಅನುಸರಿಸುವಲ್ಲಿ ಈಗಾಗಲೇ ಒತ್ತಡದಲ್ಲಿದ್ದು ಸರ್ಕಾರದ ತೀವ್ರ ಟೀಕೆಗೆ ಗುರಿಯಾಗುತ್ತಿದೆ. ಟ್ವಿಟರ್ ಮತ್ತು ಕೇಂದ್ರ ಸರ್ಕಾರ ಕಳೆದ ಕೆಲವು ತಿಂಗಳುಗಳಿಂದ ಹಲವಾರು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯವನ್ನು ಹೊಂದಿವೆ. ಈ ನಡುವೆ ಟ್ವಿಟ್ಟರ್ ನ ಈ ಎಡವಟ್ಟು ಕೇಂದ್ರದ ಟ್ವಿಟ್ಟರ್ ಮೇಲಿನ ದ್ವೇಷದ ಬೆಂಕಿಗೆ ತುಪ್ಪ ಸುರಿದಂತಾಗಿದೆ.