ಸಮಗ್ರ ನ್ಯೂಸ್: ಸಕ್ಕರೆ ಉತ್ಪಾದನೆಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ರಾಷ್ಟ್ರವಾಗಿರುವ ಭಾರತವು ಸಕ್ಕರೆ ರಫ್ತು ಮೇಲಿನ ನಿರ್ಬಂಧವನ್ನು ಮುಂದುವರಿಸಿದೆ. ದೇಶಿಯವಾಗಿ ಉತ್ಪನ್ನದಲ್ಲಿ ಕುಸಿತ ಮತ್ತು ಜಾಗತಿಕವಾಗಿ ಕೊರತೆಯಾಗುವ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಕಳೆದ ಏಳು ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಸಕ್ಕರೆ ಮಾರಾಟ ಸಂಪೂರ್ಣವಾಗಿ ಸ್ಥಗಿತವಾಗಲಿದೆ.
ಭಾರತವು ಈಗಾಗಲೇ, 2023ರ ಅಕ್ಟೋಬರ್ 31ರವರೆಗೆ ಸಕ್ಕರೆ ರಫ್ತು ಮೇಲೆ ನಿಷೇಧ ಹೇರಿದೆ. ಈ ನಿಷೇಧವನ್ನು ಮುಂದಿನ ಆದೇಶದವರೆಗೂ ಅನಿರ್ದಿಷ್ಟಾವಧಿಗೆ ವಿಸ್ತರಣೆ ಮಾಡಲಾಗಿದೆ
ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದ ಅಧಿಸೂಚನೆ ಪ್ರಕಟಿಸಿದೆ.
2023-24ನೇ ಸಾಲಿನಲ್ಲಿ ಭಾರತದ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆಯನ್ನು ಹೆಚ್ಚಿಸುವುದಕ್ಕಾಗಿ ರಫ್ತಿನ ಮೇಲೆ ನಿಷೇಧ ಹೇರಲಾಗಿದೆ. ಈ ಮೂಲಕ ಹಬ್ಬಗಳ ಸೀಸನ್‌ನಲ್ಲಿ ಸಕ್ಕರೆಯ ಬೆಲೆಯನ್ನು ನಿಯಂತ್ರಣ ಮಾಡುವುದು ಸರ್ಕಾರ ಗುರಿಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ದೇಶಿ ಮಾರುಕಟ್ಟೆಯಲ್ಲಿ ಸಕ್ಕರೆಗೆ ಹೆಚ್ಚಿನ ಬೇಡಿಕೆ ಇರುತ್ತದೆ.
ಜಾಗತಿಕ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಭಾರತವೇ ಪೂರೈಸುತ್ತಿದ್ದು. ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರವು ಜಾಗತಿಕ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲಕ್ಕೆ ಸೃಷ್ಟಿಸುವ ಸಾಧ್ಯತೆ ಇದೆ.