ಸಮಗ್ರ ನ್ಯೂಸ್: ಕರ್ನಾಟಕ ಹೈಕೋರ್ಟ್ ಗೆ ದಸರಾ ರಜೆ ಘೋಷಣೆಯಾಗಿದೆ. ಅಕ್ಟೋಬರ್ 16ರಿಂದ 21ರವರೆಗೆ ದಸರಾ ರಜೆ ಇರಲಿದೆ. ಈ ಹಿನ್ನಲೆಯಲ್ಲಿ ತುರ್ತು ಅರ್ಜಿಗಳ ವಿಚಾರಣೆಗಾಗಿ ರಜಾಕಾಲೀನ ಪೀಠಗಳನ್ನು ಕೂಡ ರಚನೆ ಮಾಡಲಾಗಿದೆ.
ಈ ಕುರಿತಂತೆ ಹೈಕೋರ್ಟ್ ನ್ಯಾಯಿಕ ರಿಜಿಸ್ಟ್ರಾರ್ ಎಂ.ಚಂದ್ರಶೇಖರ ರೆಡ್ಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಅಕ್ಟೋಬರ್ 16ರಿಂದ 21ರವರೆಗೆ ದಸರಾ ಹಿನ್ನಲೆಯಲ್ಲಿ ಹೈಕೋರ್ಟ್ ನ್ಯಾಯಪೀಠಕ್ಕೆ ರಜೆ ಇರಲಿದೆ. ಇದರ ನಡುವೆ ರಜಾಕಾಲೀನ ಪೀಠಗಳು ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿಯಲ್ಲಿ ಕರ್ತವ್ಯ ನಿರ್ವಹಿಸಲಿವೆ ಅಂತ ತಿಳಿಸಿದ್ದಾರೆ.
ಬೆಂಗಳೂರು ಹೈಕೋರ್ಟ್ ನ್ಯಾಯಪೀಠದಲ್ಲಿ ನ್ಯಾಯಮೂರ್ತಿ ಬಿ.ಎಂ ಶ್ಯಾಮ್ ಪ್ರಸಾದ್ ಹಾಗೂ ನ್ಯಾ.ಟಿ.ವೆಂಕಟೇಶ್ ನಾಯ್ಕ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಲಿದ್ದು, ನ್ಯಾ. ಸಿಎಂ ಪೊಣಚ್ಚ ಮತ್ತು ನ್ಯಾ.ಟಿ.ಜಿ ಶಿವಶಂಕರೇಗೌಡ ಅವರ ನೇತೃತ್ವದ ಏಕಸದಸ್ಯ ಪೀಠಗಳು ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿದೆ ಅಂತ ಮಾಹಿತಿ ನೀಡಿದ್ದಾರೆ.
ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನ್ಯಾಯಾಮೂರ್ತಿ ಕೆ.ಎಸ್ ಹೇಮಲೇಖಾ ಮತ್ತು ಅನಿಲ್ ಬಿ ಕಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ಮೊದಲಿಗೆ ವಿಭಾಗೀಯ ಪೀಠದ ಪ್ರಕರಣಗಳನ್ನು ವಿಚಾರಣೆ ನಡೆಸಲಿದೆ. ಆ ನಂತ್ರ ಉಭಯ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ಏಕಸದಸ್ಯ ಪೀಠದಲ್ಲಿ ಕುಳಿತು ಪ್ರಕರಣಗಳನ್ನು ವಿಚಾರಣೆ ನಡೆಸಲಿದ್ದಾರೆ ಅಂತ ತಿಳಿಸಿದ್ದಾರೆ.
ಕಲಬುರ್ಗಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನ್ಯಾ.ಹೆಚ್.ಟಿ ನರೇಂದ್ರ ಪ್ರಸಾದ್ ಮತ್ತು ಜಿ.ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠವು ಮೊದಲಿಗೆ ವಿಭಾಗೀಯ ಪೀಠದ ಪ್ರಕರಣಗಳ ವಿಚಾರಣೆ ನಡೆಸಲಿದೆ. ಆನಂತ್ರ ಏಕಸದಸ್ಯ ಪೀಠಗಳು ಪ್ರತ್ಯೇಕವಾಗಿ ಪ್ರಕರಣಗಳ ವಿಚಾರಣೆ ನಡೆಸಲಿದೆ ಅಂತ ತಿಳಿಸಿದ್ದಾರೆ.
ತುರ್ತಾಗಿ ಆಗಬೇಕಾದ ಮಧ್ಯಂತರ ತಡೆಯಾಜ್ಞೆ, ನಿರ್ದೇಶನ ಹಾಗೂ ತಾತ್ಕಾಲಿಕ ಪ್ರತಿಬಂಧಕಾದೇಶದಂತ ಪ್ರಕರಣಗಳನ್ನು ಮಾತ್ರ ವಿಚಾರಣೆಗೆ ಪರಿಗಣಿಸಲಾಗುತ್ತದೆ. ಈ ಅರ್ಜಿಗಳನ್ನು ರಜಾಕಾಲೀಕ ಪೀಠದ ವಿಚಾರಣೆಯ ದಿನ ಹೊರತುಪಡಿಸಿ, ಬೆಳಗ್ಗೆ 10 ರಿಂದ ಮಧ್ಯಾಹ್ನ 12.30ರವರೆಗೆ ಸಲ್ಲಿಸಬಹುದಾಗಿದೆ. ರಜಾಕಾಲೀನ ಪೀಠದ ವಿಚಾರಣೆಯ ದಿನದಂದು ಅರ್ಜಿ ಸಲ್ಲಿಕೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 3.30ರವರೆಗೆ ಅವಕಾಶ ಇರಲಿದೆ. ಇ-ಫೈಲಿಂಗ್ ಪೋರ್ಟಲ್ ಮೂಲಕ ಇ-ಫೈಲಿಂಗ್ ಮಾಡಬಹುದು ಅಂತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.