ಸಮಗ್ರ ನ್ಯೂಸ್: ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 2023ರ ಏಷ್ಯನ್ ಗೇಮ್ಸ್‌ನ ಮಹಿಳಾ ಕಬಡ್ಡಿ ಸ್ಪರ್ಧೆಯ ಫೈನಲ್‌ನಲ್ಲಿ ಚೈನೀಸ್ ತೈಪೆಯನ್ನು ಸೋಲಿಸುವ ಮೂಲಕ ಭಾರತೀಯ ಮಹಿಳಾ ತಂಡ ಚಿನ್ನ ಪದಕಕ್ಕೆ ಕೊರಳೊಡ್ಡಿತು.
ಶನಿವಾರ ಮುಂಜಾನೆ ಭಾರತೀಯ ತಂಡವು ಆರ್ಚರಿಯಲ್ಲಿ 2 ಚಿನ್ನ, ಒಂದು ಬೆಳ್ಳಿ, ಒಂದು ಕಂಚಿನ ಪದಕಗಳು ಮತ್ತು ಮಹಿಳಾ ಕಬಡ್ಡಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಈವರೆಗೆ 25 ಚಿನ್ನ, 35 ಬೆಳ್ಳಿ ಮತ್ತು 40 ಕಂಚು ಸೇರಿದಂತೆ 100 ಪದಕಗಳನ್ನು ಗೆಲ್ಲುವ ಮೂಲಕ 100 ಪದಕಗಳ ಐತಿಹಾಸಿಕ ದಾಖಲೆಯನ್ನು ಮುಟ್ಟಿತು.
ಶನಿವಾರ ಮುಂಜಾನೆ ಬಿಲ್ಲುಗಾರರಾದ ಪ್ರವೀಣ್ ಓಜಸ್ ಮತ್ತು ಜ್ಯೋತಿ ವೆನ್ನಮ್ ತಮ್ಮ ವೈಯಕ್ತಿಕ ಕಾಂಪೌಂಡ್ ಆರ್ಚರಿ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದರೆ, ಇದೇ ವೇಳೆ ಅಭಿಷೇಕ್ ವರ್ಮಾ ಬೆಳ್ಳಿ ಮತ್ತು ಅದಿತಿ ಸ್ವಾಮಿ ಕಂಚಿನ ಪದಕಕ್ಕೆ ಮುತ್ತಿಕ್ಕಿದರು.
ಕೆಲವೇ ಕ್ಷಣಗಳ ನಂತರ, ಭಾರತ ಮಹಿಳಾ ಕಬಡ್ಡಿ ತಂಡವು ರೋಚಕ ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆಯನ್ನು ಸೋಲಿಸಿ ಭಾರತಕ್ಕೆ 100 ಪದಕ ಗಳಿಸಲು ನೆರವಾಯಿತು.
ಏಷ್ಯನ್ ಗೇಮ್ಸ್‌ನ 2018ರ ಆವೃತ್ತಿಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದ ಭಾರತೀಯ ಮಹಿಳಾ ಕಬಡ್ಡಿ ತಂಡವು, ತಮ್ಮ ಚಿನ್ನದ ಪದಕವನ್ನು ಮರಳಿ ಪಡೆದರು. ಭಾರತ ವನಿತೆಯರ ತಂಡ ಮೊದಲಾರ್ಧದಲ್ಲಿ ಬಲಿಷ್ಠವಾಗಿ ಆರಂಭಗೊಂಡು 14-9 ಅಂತರದಲ್ಲಿ 5 ಅಂಕಗಳ ಮುನ್ನಡೆ ಸಾಧಿಸಿತು.
ಎದುರಾಳಿ ಚೈನೀಸ್ ತೈಪೆ ಪಂದ್ಯದ ದ್ವಿತೀಯಾರ್ಧದಲ್ಲಿ ಅದ್ಭುತ ಪುನರಾಗಮನದ ಪ್ರದರ್ಶನದೊಂದಿಗೆ ಪ್ರತಿರೋಧ ಒಡ್ಡಿತು. ಭಾರತ ವಿರುದ್ಧ ಪ್ರತಿ ದಾಳಿಯೊಂದಿಗೆ ಪಂದ್ಯದ ಕೊನೆಯವರೆಗೂ ಪ್ರಬಲ ಪೈಪೋಟಿ ನೀಡಿತು.
ಚೈನೀಸ್ ತೈಪೆ ತಂಡವು ಒಂದು ಹಂತದಲ್ಲಿ ಎಲ್ಲಾ ಭಾರತೀಯ ಆಟಗಾರರನ್ನು ಅಂಕಣದಿಂದ ಹೊರಹಾಕಿತು. ಈ ವೇಳೆ 2 ಹೆಚ್ಚುವರಿ ಅಂಕಗಳನ್ನು ಗೆದ್ದಿತು. ಆದಾಗ್ಯೂ, ಭಾರತ ಮಹಿಳಾ ತಂಡವು ಅದ್ಭುತವಾಗಿ ಪುನರಾಗಮನ ಮಾಡಿ ಅಂತಿಮವಾಗಿ 26-25 ಅಂತರದಿಂದ ಗೆದ್ದುಬೀಗಿತು.