ಬಂಟ್ವಾಳ : ಚಿಕ್ಕಪ್ಪನೇ ನಿರಂತರ ಅತ್ಯಾಚಾರ ಎಸಗಿ ಸಂತ್ರಸ್ತಳಾಗಿದ್ದ ಯುವತಿಯ ಪೋಷಕರು ಪನೋಲಿಬೈಲು ಕಲ್ಲುರ್ಟಿ ಮೊರೆ ಹೋಗಿದ್ದು, ಆಕೆ ಧರ್ಮ ರಕ್ಷಿಸಿದ್ದಾಳೆ ಎಂಬ ಮಾತೀಗ ತುಳುನಾಡಿನಲ್ಲಿ ಕೇಳಿಬಂದಿದ್ದು, ತಾಯಿಯ ಸತ್ಯ ಮತ್ತೆ ಗೋಚರಿಸಿದೆ.
ಮಗಳ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಚಿಕ್ಕಪ್ಪ, ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಆಲಾಡಿ ನಿವಾಸಿ ಪುರುಷೋತ್ತಮನಿಗೆ ಕಳೆದ ಶುಕ್ರವಾರ ಬೆಳಿಗ್ಗೆ ಆಕ್ಸಿಡೆಂಟ್ ಆಗಿದ್ದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾಮುಕ ಚಿಕ್ಕಪ್ಪನಿಂದಲೇ ನಿರಂತರ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಸಂತ್ರಸ್ತ ಯುವತಿಯಿಂದ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಕಳೆದ ಒಂದು ವರ್ಷದಿಂದ ಯುವತಿ ಬಿ.ಸಿ.ರೋಡ್ ಸಮೀಪದ ಸಂಬಂಧಿಕರ ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದು ಅದೇ ಮನೆಯಲ್ಲಿ ಆರೋಪಿ ಪುರುಷೋತ್ತಮ ಕೂಡ ವಾಸವಾಗಿದ್ದನು. ಸಂಬಂಧದಲ್ಲಿ ಮಗಳಾಗಿರುವ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿ ಅವಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡುತ್ತಲೇ ಬಂದಿದ್ದು, ಈತನ ಕಿರುಕುಳ ತಡೆಯಲಾಗದೆ ಮನೆಯವರಿಗೆ ತಿಳಿಸಿ ಠಾಣೆಗೆ ಯುವತಿ ದೂರು ನೀಡಿದ್ದಾಳೆ. ಆರೋಪಿಯ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ ದೂರು ನೀಡಿ ವಾರಗಳೇ ಕಳೆದರೂ ಆರೋಪಿಯ ಬಂಧನವಾಗಿರಲಿಲ್ಲ. ಆರೋಪಿ ಪುರುಷೋತ್ತಮ ತಲೆಮರೆಸಿಕೊಂಡಿದ್ದು ಪೊಲೀಸರು ಈತನ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಆರೋಪಿಯ ಸುಳಿವು ಪತ್ತೆಯಾಗಿರಲಿಲ್ಲ. ಆರೋಪಿ ಪುರುಷೋತ್ತಮ ಪೋಲೀಸರ ಕಣ್ಣು ತಪ್ಪಿಸಿ ಬೆಂಗಳೂರು ಕಡೆಗೆ ಕಾರು ಚಲಾಯಿಸಿಕೊಂಡು ಹೋಗುವಾಗ ಉಪ್ಪಿನಂಗಡಿ ಕಡಬ ರಾಜ್ಯ ಹೆದ್ದಾರಿಯ ಮಾರ್ಗವಾಗಿ ಬರುತ್ತಿದ್ದ ವೇಳೆ ರಾಮಕುಂಜ ಗ್ರಾಮದ ಕುಂಡಾಜೆ ಕಿರು ಸೇತುವೆ ಸಮೀಪ ಎದುರಿನಿಂದ ಬರುತ್ತಿದ್ದ ಬಲೆನೋ ಕಾರಿಗೆ ಢಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಅತ್ಯಾಚಾರ ಆರೋಪಿ ಪುರುಷೋತ್ತಮನ ಬಲಗಾಲು ಮುರಿದಿದ್ದು ಹಾಗೂ ಗಾಯಗಳಾಗಿದ್ದು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ನಡುವೆ ತಮ್ಮ ಮಗಳ ಜೀವನದ ಜೊತೆ ಚೆಲ್ಲಾಟವಾಡಿದಾತನಿಗೆ ತಕ್ಕ ಶಾಸ್ತಿಯಾಗುವಂತೆ ಸಂತ್ರಸ್ತೆ ಯುವತಿಯ ಪೋಷಕರು ಪನೋಲಿಬೈಲ್ ಕಲ್ಲುರ್ಟಿ ತಾಯಿಗೆ ಹರಕೆ ಬೇಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಹರಕೆ ಹೊತ್ತ ಪರಿಣಾಮದಿಂದಲೇ ಆರೋಪಿಗೆ ಅಪಘಾತ ಸಂಭವಿಸಿದೆ ಎಂಬ ಮಾತು ಕೂಡ ಕೇಳಿಬಂದಿದೆ. ತುಳುನಾಡಿನ ಮಹಾ ಕಾರಣಿಕಶಕ್ತಿ ಕಲ್ಲುರ್ಟಿಯ ಮಹಿಮೆಯನ್ನು ಜನ ಹಾಡಿ, ಹೊಗಳಿ, ಸಾರುತ್ತಿದ್ದಾರೆ. ವೈಜ್ಞಾನಿಕವಾಗಿ ದೈವ-ದೇವರ ನಿರ್ಣಯಗಳನ್ನು ಸಾಬೀತು ಪಡಿಸಲು ಸಾಧ್ಯವಾಗದಿದ್ದರೂ ಕಾನೂನಿನ ದೃಷ್ಟಿಯಿಂದ ತಪ್ಪಿಸಿಕೊಂಡು ಪೋಲಿಸರ ಕಣ್ಣು ತಪ್ಪಿಸಿ ಬೆಂಗಳೂರಿನತ್ತ ಹೊರಟಿದ್ದ ಆರೋಪಿಯ ವಾಹನ ರಸ್ತೆಯಲ್ಲಿ ಅಪಘಾತವಾಗಿದ್ದು ಪವಾಡ ಎಂಬುದನ್ನು ಅಲ್ಲಗಳೆಯುವಂತಿಲ್ಲ. ತುಳುನಾಡಿನ ಜನರ ಆರಾಧ್ಯ ಶಕ್ತಿಗಳು ಭಕ್ತರ ಆಶಯಗಳನ್ನು ಈಡೇರಿಸುತ್ತವೆ, ಅನ್ಯಾಯದ ಹಾದಿಯಲ್ಲಿ ನಡೆದವರಿಗೆ ತಕ್ಕ ಪಾಠ ಕಲಿಸುತ್ತಾ ಇರುತ್ತವೆ ಎಂಬುದಕ್ಕೆ ಈ ನಿದರ್ಶನವೂ ಸಾಕ್ಷಿಯಾಗಿದೆ ಎಂದೂ ಹೇಳಬಹುದು.
ಆರೋಪಿ ಇದೇ ರೀತಿ ಹಲವು ಯುವತಿಯರನ್ನು ವಂಚಿಸಿದ್ದು, ಅವರೆಲ್ಲರೂ ಇವನ ಕಾಮ ದೃಷ್ಟಿಗೆ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆರೋಪಿಗೆ ರಾಜ್ಯದ ಪ್ರಭಾವಿ ರಾಜಕೀಯ ನಾಯಕರುಗಳ ಜೊತೆ ಒಡನಾಟವಿದ್ದು ಹಾಗೂ ಆರೋಪಿ ಶ್ರೀಮಂತನೂ ಕೂಡ ಆಗಿದ್ದು, ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳುವ ಹೆಚ್ಚಿನ ಸಾಧ್ಯತೆಗಳಿವೆ. ಅತ್ಯಾಚಾರ ಅರೋಪದಲ್ಲಿ ತಲೆಮರೆಸಿಕೊಂಡು ಪರಾರಿಯಾಗಲು ಯತ್ನಿಸಿದ್ದ ಆರೋಪಿ ಪ್ರಸ್ತುತ ಆಸ್ಪತ್ರೆಯಲ್ಲಿದ್ದು, ಅಲ್ಲಿಂದ ಡಿಸ್ಚಾರ್ಜ್ ಆದ ಬಳಿಕ ಪೋಲೀಸರು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ. ಆದರೆ ಆರೋಪಿಯನ್ನು ಆಸ್ಪತ್ರೆಯಿಂದ ಬೇರೆ ಸ್ಥಳಕ್ಕೆ ಮಾಡುವ ಮೂಲಕ ಬಂಧನವಾಗುವುದರಿಂದ ತಪ್ಪಿಸಿಕೊಳ್ಳುವಂತೆ ತೆರೆಮರೆಯ ರಾಜಕೀಯ ಪ್ರಯತ್ನ ಕೂಡ ನಡೆಯುತ್ತಿದೆ ಎಂದೂ ಕೂಡ ತಿಳಿದುಬಂದಿದೆ.