ಶಿವಮೊಗ್ಗ: ಮಿಸ್ಸ್’ಡ್ ಕಾಲ್’ನಿಂದ ಪರಿಚಯವಾದ ಯುವಕನನ್ನು ಪ್ರೀತಿಸಿ ಮದುವೆಯಾಗಿ ದಾಂಪತ್ಯ ಜೀವನದ ಏಳೇ ತಿಂಗಳಿನಲ್ಲಿ ಯುವತಿ ಒಬ್ಬಳು ನಿಗೂಢವಾಗಿ ಸಾವನ್ನಪ್ಪಿದ ಘಟನೆ ಹೊಸನಗರ ತಾಲೂಕಿನ ಕಾಡಿಗ್ಗೇರಿಯಲ್ಲಿ ನಡೆದಿದೆ.
ಹಾಸನದ ಸಕಲೇಶಪುರ ತಾಲೂಕಿನ ಗೋಳಗೊಂಡ ಗ್ರಾಮದ ಸುಂದರ ಯುವತಿ ಸೌಂದರ್ಯ(21) ಗೆ ಒಂದು ಮಿಸ್ಸ್’ಡ್ ಕಾಲ್ ಮೂಲಕ ಕಾಡಿಗ್ಗೇರಿಯ ಯುವಕ ಉಮೇಶ್ ಎಂಬಾತನ ಪರಿಚಯವಾಗಿದೆ. ನಂತರ ಫೇಸ್ಬುಕ್’ನಲ್ಲಿ ಸ್ನೇಹಿತರಾಗಿದ್ದಾರೆ. ದಿನಕಳೆದಂತೆ ವಾಟ್ಸಾಪ್’ಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರೊಡೆದು ಬೆಳೆದಿದೆ. ಯುವತಿ ಮನೆಯವರ ವಿರೋಧದ ನಡುವೆಯೂ ಕಳೆದ ಏಳು ತಿಂಗಳ ಹಿಂದೆ ಇಬ್ಬರಿಗೆ ಮದುವೆಯಾಗಿದೆ.
ಇಬ್ಬರೂ ಬೇರೆ ಬೇರೆ ಜಾತಿಯವರಾಗಿದ್ದ ಕಾರಣ ಆರಂಭದಲ್ಲಿ ವಿರೋಧಿಸಿದ್ದ ಮನೆಯವರು ನಂತರ ಹೊಂದಿಕೊಂಡಿದ್ದರು. ಉಮೇಶ್ ಮತ್ತು ಸೌಂದರ್ಯ ಕೂಡ ಮದುವೆಯ ಬಳಿಕ ಅನ್ಯೋನ್ಯವಾಗಿದ್ದರು. ಆದರೆ ಇತ್ತೀಚೆಗೆ ಉಮೇಶ್ ತಂದೆ-ತಾಯಿ ಬೇರೆ ಜಾತಿಯವಳು ಎಂದು ಹೇಳಿಕೊಂಡು ಸೌಂದರ್ಯಾಗೆ ಕಿರುಕುಳ ನೀಡಲಾರಂಭಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಸೌಂದರ್ಯ ತನ್ನ ತಂದೆ ತಾಯಿಗೆ ಮಾಹಿತಿ ನೀಡಿದ್ದಳು. ಆ ಬಳಿಕ ಜೂನ್ 25ರಂದು ಸೌಂದರ್ಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಇದು ಆತ್ಮಹತ್ಯೆಯೋ…? ಕೊಲೆಯೋ…?
ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡ ದಿನದಂದು ಉಮೇಶ್ ಮನೆಯಲ್ಲಿ ಇರಲಿಲ್ಲವಂತೆ. ಆ ಸಮಯದಲ್ಲಿ ಮನೆಯಲ್ಲಿದ್ದ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ಮತ್ತು ತಂಗಿ ಉಮೇಶ್ ಗೆ ತಿಳಿಸಿದ್ದಾರೆ. ನಂತರ ಮನೆಗೆ ತೆರಳಿದ ಉಮೇಶ್, ಸೌಂದರ್ಯ ತಂದೆ-ತಾಯಿಗೆ ವಿಷಯ ಮುಟ್ಟಿಸಿದ್ದಾನೆ. ಈ ಬಗ್ಗೆ ಸೌಂದರ್ಯ ತಂದೆ-ತಾಯಿ ಇದು ಆತ್ಮಹತ್ಯೆಯಲ್ಲ ವ್ಯವಸ್ಥಿತ ಕೊಲೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನನ್ವಯ ಪೊಲೀಸರು ಉಮೇಶನನ್ನು ಬಂಧಿಸಿದ್ದಾರೆ. ಆತನ ತಂದೆ ತಾಯಿ ಮತ್ತು ತಂಗಿ ನಾಪತ್ತೆಯಾಗಿದ್ದಾರೆ.
ಮೂರು ವಾರದ ಹಿಂದೆ ಸೌಂದರ್ಯ ತಂಗಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಳು…!
ಇನ್ನೊಂದು ದುರಂತ ಅಂದರೆ ಸೌಂದರ್ಯ ತಂಗಿ, ಉದಯ್-ಅನಿತಾ ದಂಪತಿಯ ಎರಡನೇ ಮಗಳು ಐಶ್ವರ್ಯ (19) ಸಹ ಜೂ.8 ರಂದು ಅನುಮಾನಸ್ಪದವಾಗಿ ಸಾವಿಗೀಡಾಗಿದ್ದಳು. ಐಶ್ವರ್ಯಳನ್ನು ಕಳೆದ ವರ್ಷ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಾವೇರಿಪುರದ ನಾಗರಾಜು ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಕಳೆದ 20 ದಿನದ ಹಿಂದೆ ಆಕೆಯು ಸಾವನ್ನಪ್ಪಿದ್ದಾಳೆ. ಐಶ್ವರ್ಯ ಪತಿ ನಾಗರಾಜುಗೆ ಅನೈತಿಕ ಸಂಬಂಧ ಇತ್ತು. ಹೀಗಾಗಿ ಮಗಳು ಗಂಡನನ್ನು ಈ ಬಗ್ಗೆ ಪ್ರಶ್ನಿಸಿದ್ದಾಳೆ. ಗಂಡನೇ ಆಕೆಯನ್ನು ಹೊಡೆದು ಕೊಲೆ ಮಾಡಿದ್ದಾನೆ ಎಂದು ಐಶ್ವರ್ಯ ತಂದೆ ಉದಯ್ ಪೊಲೀಸರಿಗೆ ದೂರು ನೀಡಿದ್ದಾರೆ.
ತಂಗಿ ಐಶ್ವರ್ಯ ಮೃತಪಟ್ಟ ಕೆಲವೇ ದಿನದ ಅಂತರದಲ್ಲಿ ಅಕ್ಕ ಸೌಂದರ್ಯ ಸಹ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದಾಳೆ. ಉದಯ್ ಹಾಗೂ ಅನಿತಾ ದಂಪತಿ ತಮ್ಮ ಇಬ್ಬರು ಮಕ್ಕಳನ್ನು ಕಷ್ಟಪಟ್ಟು ಸಾಕಿ ಬೆಳೆಸಿದ್ದರು. ಮಕ್ಕಳು ಬದುಕು ಕಟ್ಟಿಕೊಳ್ಳುವ ಹೊತ್ತಿಗೆ ದುರಂತ ಸಾವಿಗೀಡಾಗಿರುವುದು ಹೆತ್ತವರಿಗೆ ಸಹಿಸಲು ಆಗದಂತಹ ನೋವು ತರಿಸಿದೆ.