ಸಮಗ್ರ ನ್ಯೂಸ್: ಮಂಗಳೂರಿನ ಬಜ್ಪೆ ಸಮೀಪದ ಪೆರ್ಮುದೆಯಲ್ಲಿ 18 ವರ್ಷದ ಮುಸ್ಲಿಂ ಯುವಕನ ಮೈ ಮೇಲೆ ದೈವ ಆವಾಹನೆಯಾದ ಘಟನೆ ನಡೆದಿದೆ.
ಮೂವತ್ತು ವರ್ಷಗಳ ಹಿಂದೆ ಪ್ರತಿಷ್ಠಿತ ಕಂಪನಿಯೊಂದು ಮಂಗಳೂರಿನ ಬಜ್ಪೆ ಸಮೀಪದ ಪೆರ್ಮುದೆ ವ್ಯಾಪ್ತಿಯಲ್ಲಿ ಭೂಸ್ವಾಧೀನ ಮಾಡಿಕೊಂಡು ಉದ್ಯಮ ಆರಂಭಿಸಿತ್ತು. ಭೂಸ್ವಾಧೀನದಲ್ಲಿ ಪಿಲಿಚಾಮುಂಡಿ ದೈವದ ಗಡುವಾಡು ಸ್ಥಳ ಕಂಪನಿಯ ಪಾಲಾಗಿತ್ತು. ಇದರ ನಡುವೆ, ಇಲ್ಲಿನ ಭಕ್ತರು ದೈವವನ್ನು ಪೆರ್ಮುದೆಯ ಸೋಮನಾಥಧಾಮಕ್ಕೆ ಸ್ಥಳಾಂತರ ಮಾಡಿದ್ದರು ಎನ್ನಲಾಗಿದೆ.
ಸ್ಥಳಾಂತರದ ಬಳಿಕ ಗಡು ಸ್ಥಳದಲ್ಲಿ ಹದಿನೆಂಟು ವರ್ಷಗಳಿಂದ ಆರಾಧನೆ ನಿಂತು ಹೋಗಿತ್ತು. ಬಳಿಕ ಕಂಪನಿಗೆ ಮತ್ತು ಗ್ರಾಮಸ್ಥರಿಗೆ ಅನೇಕ ಕಷ್ಟ ಕಾರ್ಪಣ್ಯಗಳು ತಲೆದೋರಿದ್ದವು. ನಿರಂತರ ಸಮಸ್ಯೆಗಳು ಅಲ್ಲಿನ ಜನರನ್ನು ಬೆನ್ನುಹತ್ತಿತ್ತು ಎಂದು ಸ್ಥಳೀಯರು ವಿವರಿಸಿದ್ದಾರೆ.
ಭೂ ಸ್ವಾಧೀನ ಪಡೆದುಕೊಂಡಿದ್ದ ಕಂಪನಿ ಈ ಜಾಗದಲ್ಲಿ ದೈವಸ್ಥಾನ ನಿರ್ಮಿಸಿ ಅರ್ಚಕರಿಂದ ತ್ರಿಕಾಲ ಪೂಜಾ ಕೈಂಕರ್ಯ ನಡೆಸುತ್ತಿದೆ. ಹೀಗಿದ್ದರೂ ಕೂಡ ಕಂಪನಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಇದರ ನಡುವೆಯೇ ಎರಡು ತಿಂಗಳ ಹಿಂದೆ ದೈವಸ್ಥಾನದ ಆವರಣ ಗೋಡೆ ನಿರ್ಮಾಣದ ವೇಳೆ ಅಲ್ಲಿದ್ದ ಒಡಿಶಾ ಮೂಲದ ಮುಸ್ಲಿಂ ಯುವಕನ ಮೈ ಮೇಲೆ ದೈವಾವೇಷವಾಗಿದೆ ಎನ್ನಲಾಗಿದೆ.
ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಊರಿನವರು ಪೆರ್ಮುದೆ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರಶ್ನಾ ಚಿಂತನೆ ಕೇಳಿದ್ದರು. ಹೀಗೆ ಪ್ರಶ್ನೆ ಕೇಳಿದ ಸಂದರ್ಭ ದೈವ ಪ್ರಶ್ನೆಯಲ್ಲಿ ಗಡುವಾಡು ಸ್ಥಳದಲ್ಲಿ ದೈವಕ್ಕೆ ನೇಮೋತ್ಸವ ಮಾಡಲು ಸೂಚನೆ ಕೊಡಲಾಗಿದೆ. ಈ ಸೂಚನೆಯ ಮೇರೆಗೆ ಹದಿನೆಂಟು ವರ್ಷದ ಬಳಿಕ ಪಿಲಿಚಾಮುಂಡಿ ದೈವಕ್ಕೆ ನೇಮೋತ್ಸವ ಮಾಡಲು ಗ್ರಾಮಸ್ಥರು ತೀರ್ಮಾನ ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.