ಸಮಗ್ರ ನ್ಯೂಸ್: ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖಾ ವರದಿಯನ್ನು ಅಂಗೀಕರಿಸಿದೆ. ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದ್ದ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಆಗಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪಗಳನ್ನು ಮಾಡಿತ್ತು. ಘಟನೆಯಲ್ಲಿ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಲಾಗಿತ್ತು. ಹೀಗಾಗಿ ಬಿಜೆಪಿ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಿತ್ತು. ಸದ್ಯ ಈಗ ಮ್ಯಾಜಿಸ್ಟ್ರೇಟ್ ತನಿಖಾ ವರದಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಅಂಗೀಕರಿಸಿದೆ.
ಮಾಜಿ ಶಾಸಕ ಅಖಂಡ ಶ್ರೀನಿವಾಸ ಮನೆ ಮೇಲೆ ನಡೆದಿದ್ದ ದಾಳಿ ಬಳಿಕ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಕಿಡಿಗೇಡಿಗಳು ಮುಂದಾಗಿದ್ದರು. ಈ ವೇಳೆ ಪರಿಸ್ಥಿತಿ ನಿಯಂತ್ರಣ ಮಾಡಲು ಪೊಲೀಸರು ಗೋಲಿಬಾರ್ ನಡೆಸಿದ್ದರು. ಈ ಬಗ್ಗೆ ಮೃತ ಆರೋಪಿಗಳ ಕುಟುಂಬಸ್ಥರು ನಕಲಿ ಎನ್ಕೌಂಟರ್ ಎಂದು ಪ್ರಶ್ನೆ ಮಾಡಿದ್ದರು. ಘಟನೆಯನ್ನ ಖಂಡಿಸಿ ಆಗಿನ ಬಿಜೆಪಿ ಸರ್ಕಾರದ ಕೈವಾಡದ ಬಗ್ಗೆ ಕಾಂಗ್ರೆಸ್ ಶಂಕೆ ವ್ಯಕ್ತಪಡಿಸಿತ್ತು. ಸಮುದಾಯ ಟಾರ್ಗೆಟ್ ಮಾಡಿದೆ ಎಂದು ಆರೋಪ ಮಾಡಿತ್ತು. ಹೀಗಾಗಿ ಬಿಜೆಪಿ ಸರ್ಕಾರ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಿತ್ತು. ಸದ್ಯ ಈಗ ಜಿಲ್ಲಾಧಿಕಾರಿ ಹಾಗೂ ಮ್ಯಾಜಿಸ್ಟ್ರೇಟ್ ತನಿಖೆಯ ವರದಿಯನ್ನು ನೂತನ ಕಾಂಗ್ರೆಸ್ ಸರ್ಕಾರ ಸ್ವೀಕರಿಸಿದೆ.
ಮ್ಯಾಜಿಸ್ಟ್ರೇಟ್ ತನಿಖೆಯಲ್ಲಿ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗಿದೆ. ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ಜಿಲ್ಲಾಧಿಕಾರಿಗಳು ವರದಿ ನೀಡಿದ್ದರು. ಪೊಲೀಸರ ಗೋಲಿಬಾರ್ ಕ್ರಮ ಸರಿ ಇದೆ ಎಂದು ಜಿಲ್ಲಾಧಿಕಾರಿ ವರದಿ ನೀಡಿದ್ದರು. ಅಂದು ಪೋಲಿಸರು ಗೋಲಿಬಾರ್ ಮಾಡಿರದಿದ್ದರೆ ಇಡೀ ಠಾಣೆ ಕಿಡಿಗೇಡಿಗಳು ಬೆಂಕಿಗೆ ಹಚ್ಚುತ್ತಿದ್ದರು. ಸ್ವಯಂ ರಕ್ಷಣೆ ಹಾಗೂ ಸಾರ್ವಜನಿಕ ಆಸ್ತಿ ಕಾಪಾಡಲು ಗೋಲಿಬಾರ್ ನಡೆದಿದೆ ಎಂದು ರಿಪೋರ್ಟ್ ನೀಡಲಾಗಿತ್ತು. ಇನ್ನು 2023ರ ಜನವರಿ ತಿಂಗಳಲ್ಲಿ ಮ್ಯಾಜಿಸ್ಟ್ರೇಟ್ ವರದಿ ನೀಡಿತ್ತು. ಆಗ ವಿಪಕ್ಷದಲ್ಲಿದ್ದ ಕಾಂಗ್ರೆಸ್ ಮ್ಯಾಜಿಸ್ಟ್ರೇಟ್ ವರದಿಯನ್ನ ಟೀಕಿಸಿತ್ತು. ಚುನಾವಣಾ ಸಮಯದಲ್ಲಿ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿವೆ ಎಂದು ಕಾಂಗ್ರೆಸ್ ಟೀಕಿಸಿತ್ತು. ಈಗ ಅಧಿಕಾರಕ್ಕೆ ಬಂದ ಬಳಿಕ ರಿಪೋರ್ಟ್ ಒಪ್ಪಿಕೊಂಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರದ ಕ್ಯಾಬಿನೆಟ್ ನಿರ್ಧಾರವನ್ನ ಒಪ್ಪಿ ರಾಜ್ಯಪತ್ರ ಹೊರಡಿಸಿದೆ.