ಸಮಗ್ರ ನ್ಯೂಸ್: ಇಂದು ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಹಸಿರು ಬಾವುಟ ಹಿಡಿದು ಸಾಗುತ್ತಿದ್ದ ಯುವಕರು ಬಿಜೆಪಿ ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಅವರ ಬ್ಯಾನರ್ ಹರಿದು ಹಾಕಿ ಶಾಂತಿ ಸೌಹಾರ್ದತೆ ಕದಡಲು ಯತ್ನಿಸಿದ ಘಟನೆ ವಿಜಯಪುರದ ಶಿವಾಜಿ ವೃತ್ತದಲ್ಲಿ ನಡೆದಿದೆ.
ಗಣೇಶ ಚತುರ್ಥಿಗೆ ಶುಭಕೋರುವ ನಿಟ್ಟಿನಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಭಾವಚಿತ್ರವಿದ್ದ ಬ್ಯಾನರ್ ಅನ್ನು ಶಿವಾಜಿ ವೃತ್ತದಲ್ಲಿ ಹಾಕಲಾಗಿತ್ತು. ಆದರೆ ಇಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಡೆಸಲಾದ ಮೆರವಣಿಗೆ ಇದೇ ವೃತ್ತದಿಂದ ಸಾಗಿದೆ. ಈ ವೇಳೆ ಯುವಕರು ಹಸಿರು ಬಾವುಟದ ಕೋಲಿನಿಂದ ಚುಚ್ಚಿ ಬ್ಯಾನರ್ ಹರಿದು ಹಾಕಿದ್ದಾರೆ.
ಯುವಕರ ಕಿಡಿಗೇಡಿತನದ ದೃಶ್ಯವನ್ನು ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ವೈರಲ್ ಆಗುತ್ತಿದೆ. ಸುದ್ದಿ ತಿಳಿಯುತ್ತಿದ್ದಂತೆ ಗಾಂಧಿಚೌಕ್ ಠಾಣಾ ಪೊಲೀಸರು ಮೆರವಣಿಗೆಯಲ್ಲಿ ಭಾಗಿಯಾಗಿದ್ದವರನ್ನು ಚದುರಿಸಿದರು. ಸ್ಥಳಕ್ಕೆ ಎಸ್ಪಿ ಋಷಿಕೇಶ ಸೋನವಣೆ ಹಾಗೂ ಇತರೆ ಆಧಿಕಾರಿಗಳು ಕೂಡ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗೃತಾ ಕ್ರಮವಾಗಿ ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಒಂದು ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ.
ಇನ್ನೊಂದು ಕಡೆ ಯತ್ನಾಳ್ ಬೆಂಬಲಿಗರು ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ