ಕಾರವಾರ: ಅಂದಾಜು ಮೂವತ್ತು ವರ್ಷಗಳ ಹಿಂದೆ ಕಾರವಾರದ ಸಮುದ್ರ ಭಾಗದಲ್ಲಿ ಮುಳುಗಡೆಯಾಗಿದ್ದ ಸಿಂಗಾಪುರ ದೇಶದ ಚೆರಿಮಾಜು ಎಂಬ ಹೆಸರಿನ ಸರಕು ಸಾಗಾಣಿಕೆ ಹಡಗಿನ ಅವಶೇಷಗಳು ಇಂದು ಕಾರವಾರ ಕಡಲತೀರದಲ್ಲಿ ಪತ್ತೆಯಾಗಿದೆ.
1981 ರಲ್ಲಿ ಸಿಂಗಾಪುರದಿಂದ ಕಾರವಾರದ ಬಂದರಿಗೆ ಬಂದಿದ್ದ ಈ ಹಡಗು 14.418 ಟನ್ ಡಾಂಬರ್ ಅನ್ನು ಹೊತ್ತು ತಂದಿತ್ತು. ಈ ವೇಳೆ ಕಡಲಬ್ಬರಕ್ಕೆ ಸಿಲುಕಿದ್ದ ಈ ಹಡಗು ಇಲ್ಲಿಯೇ ಸಂಪೂರ್ಣ ಸಮುದ್ರದಾಳಕ್ಕೆ ಸೇರಿ ಹೋಗಿತ್ತು. ಈ ವೇಳೆ ಹಡಗಿನಲ್ಲಿದ್ದ 30 ನಾವಿಕರನ್ನು ರಕ್ಷಣೆ ಮಾಡಲಾಗಿತ್ತು.
ಹುದುಗಿ ಹೋಗಿದ್ದ ಹಡಗನ್ನು ಮೇಲೆತ್ತಲು ವಿಫಲ
1981ರಲ್ಲಿ ಕಾರವಾರದ ಸಮುದ್ರದಲ್ಲಿ ಹುದುಗಿ ಹೋಗಿದ್ದ ಸಿಂಗಾಪುರ ಮೂಲದ ಈ ಹಡಗನ್ನು ಮೇಲೆತ್ತಲು ಪ್ರಯತ್ನ ಮಾಡಲಾಗಿತ್ತು. ಆದರೇ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಅಲ್ಲಿನ ಕಂಪನಿ ಸಮುದ್ರಾಳದಲ್ಲೇ ಹಡಗಿನ ಅವಶೇಷಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿತ್ತು. ಆದರೇ ಅತೀ ಆಳ ಹಾಗೂ ಹೆಚ್ಚು ಮರಳು ತುಂಬಿದ್ದರಿಂದ ಅಲ್ಪ ಭಾಗವನ್ನಷ್ಟೇ ಮೇಲೆತ್ತಲಾಗಿತ್ತು.
ಆದರೇ ಇದೀಗ ಕ್ವಿಂಟಾಲ್ ಗಟ್ಟಲೇ ತೂಕವಿರುವ ಕಬ್ಬಿಣದ ಹಡಗಿನ ಅವಶೇಷ ತನ್ನಿಂದ ತಾನೇ ಮೇಲೆದ್ದು ಬಂದಿರುವುದು ಸ್ಥಳೀಯ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.