ಸಮಗ್ರ ನ್ಯೂಸ್: ಕಾವೇರಿ ಕಿಚ್ಚು ಉರಿಯುತ್ತಲೆ ಇದೆ. ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿ ನೂರಾರು ಸಂಘಟನೆಗಳು ನಾಳೆ ಕರ್ನಾಟಕ ಬಂದ್ಗೆ ಕರೆ ಕೊಟ್ಟಿವೆ. ಹೀಗಾಗಿ ಶುಕ್ರವಾರ ಅಖಂಡ ಕರ್ನಾಟಕ ಸ್ತಬ್ಧವಾಗಲಿದೆ. ಬಂದ್ ನಡುವೆಯೂ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳ ಸಂಚಾರ ಇರಲಿದೆ ಎಂದು ಸಾರಿಗೆ ನಿಗಮಗಳು ತಮ್ಮ ಸಿಬ್ಬಂದಿಗೆ ಖಡಕ್ ಸೂಚನೆಯೊಂದನ್ನು ಕೊಟ್ಟಿದೆ.
ಕಾವೇರಿ ನೀರಿಗಾಗಿ ನಾಳೆ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಈ ಬಂದ್ಗೆ ಸಂಘ-ಸಂಸ್ಥೆಗಳು ಸೇರಿದಂತೆ ನೂರಾರು ಸಂಘಟನೆಗಳು ಬೆಂಬಲ ನೀಡಿವೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬಹುತೇಕ ಅಖಂಡ ಕರ್ನಾಟಕ ಸ್ತಬ್ದವಾಗಲಿದೆ. ಇದರ ನಡುವೆ ಸಾರ್ವಜನಿಕರ ಸಂಚಾರನಾಡಿ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರಕ್ಕೆ ನಿಗಮಗಳು ತೀರ್ಮಾನಿಸಿವೆ. ಈ ಹಿನ್ನೆಲೆಯಲ್ಲಿ ನೌಕರರಿಗೆ ನಾಳೆ ಕಡ್ಡಾಯ ಹಾಜರಾತಿಗೆ ಸೂಚನೆ ನೀಡಲಾಗಿದೆ.
ದೀರ್ಘಾವಧಿ, ವಾರದ ರಜೆ ಹೊರತುಪಡಿಸಿ ಉಳಿದ ಎಲ್ಲಾ ನೌಕರರು ಕಡ್ಡಾಯವಾಗಿ ನಾಳೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ನೌಕರರಿಗೆ ಸಾರಿಗೆ ನಿಗಮಗಳು ಸೂಚನೆ ನೀಡಿವೆ. ಸಾರಿಗೆ ನಿಗಮಗಳು ಅಗತ್ಯ ಸೇವೆಗಳ ಅಡಿಯಲ್ಲಿ ಬರುವುದರಿಂದ ಸೇವೆ ನೀಡಬೇಕು. ಹೀಗಾಗಿ ಯಾರು ಸಹ ನಾಳಿನ ಬಂದ್ ನಲ್ಲಿ ಭಾಗಿಯಾಗುವಂತಿಲ್ಲ. ಒಂದು ವೇಳೆ ಕೆಲಸಕ್ಕೆ ಗೈರು ಆಗಿ ಬಂದ್ ನಲ್ಲಿ ಭಾಗಿಯಾದ್ರೆ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಸಹ ನೀಡಲಾಗಿದೆ.
ಮುಂಜಾಗ್ರತಾ ಕ್ರಮಕ್ಕೆ ಮುಂದಾದ ಬಿಎಂಟಿಸಿ
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಸ್ತಿಗೆ ಹಾನಿಯಾಗದಂತೆ ಬಿಎಂಟಿಸಿ ನಿಗಮ ಮುಂಜಾಗ್ರತಾ ಕ್ರಮಕೈಗೊಂಡಿದೆ. ಬಿಎಂಟಿಸಿ ಎಲ್ಲ ಡಿಪೋಗಳಿಗೂ ಪೊಲೀಸ್ ಭದ್ರತೆ ನೀಡುವಂತೆ ನಿಗಮ ಮನವಿ ಮಾಡಿದೆ. ಅಲ್ಲದೇ ಬಸ್ ನಿಲ್ದಾಣಗಳಲ್ಲೂ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದೆ. ಈ ಮೂಲಕ ಬಿಎಂಟಿಸಿ ಬಸ್ ರಸ್ತೆಗಿಳಿದಾಗ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಮುಂದಾಗಿದೆ.
ಡಿಪೋ ಮ್ಯಾನೇಜರ್ ಗಳು ಕಡ್ಡಾಯವಾಗಿ ಡಿಪೋದಲ್ಲಿದ್ದು ಬಸ್ ಕಾರ್ಯಚರಣೆ ನಡೆಸುವಂತೆ ಸೂಚನೆ ನೀಡಲಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಸ್ ಗಳ ಕಾರ್ಯಚರಣೆ ಮಾಡಲು ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.