ಸಮಗ್ರ ನ್ಯೂಸ್: ಪ್ರತಿದಿನ ನೂರಾರು ಮಂದಿ ಓಡಾಡುವ ರಸ್ತೆ ಹೊಂಡ ಗುಂಡಿಗಳಿಂದ ಮುಕ್ತಿಯಾಗದೆ ಇರುವುದರಿಂದ ಕೊನೆಗೆ ದಾರಿತೋಚದೆ ಐವರ್ನಾಡಿನಲ್ಲಿ ಉಗ್ರ ಪ್ರತಿಭಟನಾ ಎಚ್ಚರಿಕೆ ಬ್ಯಾನರ್ ಅಳವಡಿಕೆ ಮಾಡಿದ್ದಾರೆ.
ದಿನ ಬೆಳಗಾದರೆ ಇಲ್ಲಿ ನೂರಾರು ಮಂದಿ ಸೇರಿದಂತೆ ಶಾಲಾ ಮಕ್ಕಳು,ಐವರ್ನಾಡು ಪಂಚಲಿಂಗೇಶ್ವರ ಸನ್ನಿಧಾನಕ್ಕೆ ಭಕ್ತರು ಓಡಾಡುತ್ತಾರೆ, ಕೆಲವರು ನಡೆದುಕೊಂಡು ಹೋದರೆ ಇನ್ನೂ ಕೆಲವರು ತಮ್ಮ ತಮ್ಮ ವಾಹನಗಳಲ್ಲಿ ಓಡಾಡುತ್ತಾರೆ. ಆದರೆ ಈ ರಸ್ತೆಯಲ್ಲಿ ಓಡಾಡಿದ ಬಳಿಕ ಮನೆಗೆ ಬಂದು ಮೈ-ಕೈ ನೋವಿನಿಂದ ಏನು ಕೆಲಸ ಮಾಡದ ಪರಿಸ್ಥಿತಿ ಇಲ್ಲಿನ ಜನರಿಗೆ ಕಾಡುತ್ತಿದೆ.
ತಮ್ಮ ಆರೋಗ್ಯ ಸರಿಯಾಗಬೇಕಾದರೆ ಈ ರಸ್ತೆ ಮೊದಲು ಸರಿಯಾಗಬೇಕು ಹಾಗಾಗಿ ಇಲ್ಲಿನ ಊರಿನವರು ಸೇರಿ ನಮ್ಮ ಸಮಸ್ಯೆಗೆ ಒಂದು ದಯಮಾಡಿ ಪರಿಹಾರ ಮಾಡಿ ಕೊಡಿ ಎಂದು ಜನಪ್ರತಿನಿಧಿಗಳಿಗೆ, ಇಲಾಖಾ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಅವರಿಗೇನು ಇದರಿಂದ ಸಮಸ್ಯೆ ಇರುವುದಿಲ್ಲ ಅಲ್ವಾ.!! ಅವರ ಮನೆಗೆ ಹೋಗುವ ರಸ್ತೆ ಕಾಂಕ್ರೀಟ್ ಆದರೆ ಸಾಕು. ಊರವರ ಉಸಾಬರಿ ನಮಗೇಕೆ ಎಂದು ಕೈ ಕಟ್ಟಿ ಕುಳಿತಿದ್ದಾರೆ.
ಹೌದು ಇಂತಹ ಒಂದು ಸಮಸ್ಯೆ ಇರುವುದು ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ದೇರಾಜೆ ರಸ್ತೆ. ಇದು ಸುಳ್ಯ ತಾಲೂಕಿಗೆ ಕಣ್ಣು ಎಂಬ ಹೆಗ್ಗಳಿಕೆ ಹೊಂದಿದ ನಾಡು,ಶೈಕ್ಷಣಿಕವಾಗಿ 5 ಶಾಲೆ ಹೊಂದಿದ ಊರು, ಕ್ರೀಡೆಯಲ್ಲಿ ರಾಷ್ಟ್ರ ಕಂಡ ಊರು,ರಾಜಕೀಯದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ನಾಯಕರನ್ನು ಸುಳ್ಯದಿಂದ ತಯಾರು ಮಾಡಿ ಕಳುಹಿಸಿಕೊಟ್ಟ ಊರು. ಆದರೆ ಇಂತಹ ಊರು ಎಂತಾ ದುಸ್ಥಿತಿಯಲ್ಲಿದೆ. ಇದರಿಂದ ಬೇಸತ್ತು ಊರವರು ಇದೀಗ 2 ತಿಂಗಳ ಒಳಗಾಗಿ ನಮ್ಮ ಈ ಸಮಸ್ಯೆಗಳನ್ನು ಸಂಬಂಧ ಪಟ್ಟವರು ಬಗೆಹರಿಸದಿದ್ದಲ್ಲಿ ಮುಂದೆ ಬರುವ ಎಲ್ಲಾ ಚುನಾವಣೆಗಳನ್ನು ಸಾಮೂಹಿಕ ಬಹಿಷ್ಕಾರ, ರಸ್ತೆ ತಡೆ ಹಾಗೂ ಉಗ್ರ ಪ್ರತಿಭಟನೆ ನಡೆಸಲು ಸಿದ್ದರಾಗಿದ್ದಾರೆ.
ಇದರಿಂದಾಗಿಯಾದರು ಈ ಊರಿನ ಸಮಸ್ಯೆಗೆ ಮುಕ್ತಿ ದೊರಕಲಿ. ಮಗು ಕೂಗಿದರೆ ಮಾತ್ರ ತಾಯಿ ಹಾಲು ಕೊಡುವುದು ಎಂಬಂತೆ ಜನಪ್ರತಿನಿಧಿಗಳಿಗೆ, ಇಲಾಖಾ ಅಧಿಕಾರಿಗಳಿಗೆ ಸಣ್ಣಮಟ್ಟಿನ ಮನವಿಗಳೆಲ್ಲಾ ಕಣ್ಣಿಗೆ ಕಾಣಲ್ಲ. ಆದ್ದರಿಂದ ಇಂತಹ ಪ್ರತಿಭಟನೆಗಳೇ ಇವರನ್ನು ಬಡಿದೆಬ್ಬಿಸಲು ಇರುವ ದಾರಿ ಆದರೆ ಪ್ರತಿಭಟನೆಗಳು ನ್ಯಾಯಯುತವಾಗಿರಲಿ.