ಸಮಗ್ರ ನ್ಯೂಸ್: ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ, ರಾಜ್ಯದ ನಾನಾ ಜಿಲ್ಲೆಯಲ್ಲಿ ಈ ಸಮಸ್ಯೆಯನ್ನು ಎದುರಿಸಿಕೊಂಡು ಬಂದಿದೆ.
ಆದರೆ ಇಲ್ಲಿನ ಬಾವಿಯ ಪರಿಸ್ಥಿತಿಯನ್ನೊಮ್ಮೆ ನೋಡಿ, ನೀರೇನೋ ಇದೆ. ಆದ್ರೆ, ಅದೇ ಬಾವಿಯಲ್ಲಿ ಚಪ್ಪಲಿ, ಬಾಟಲಿ, ಕೊಳೆತ ವಸ್ತುಗಳು, ಸತ್ತ ಕೋಳಿ ಹೀಗೆ ಏನೆಲ್ಲಾ ಇರಬಾರದೋ ಅವೆಲ್ಲವೂ ಇವೆ. ಈ ದೃಶ್ಯ ಕಂಡುಬಂದಿದ್ದು ಮಡಿಕೇರಿ ತಾಲ್ಲೂಕಿನ ಕೊಯನಾಡು ಗ್ರಾಮದಲ್ಲಿ.
ಇಲ್ಲಿ ಸುಮಾರು 30 ಕುಟುಂಬಗಳಿದ್ದು, ಇವರೆಲ್ಲರಿಗೂ ಇದೊಂದೆ ನೀರಿನ ಮೂಲವಾಗಿದೆ. ತಮ್ಮ ಏರಿಯಾದಲ್ಲೇ ಬೋರ್ವೆಲ್ ಒಂದು ಇದ್ದರೂ ಅದು ಕೆಲಸ ಮಾಡುತ್ತಿಲ್ಲ. ಹಾಗಾಗಿ ಇವರೆಲ್ಲ ಇದೇ ಬಾವಿಯನ್ನು ಅವಲಂಬಿಸಿದ್ದಾರೆ. ಆದ್ರೆ, ಬಾವಿಗೆ ಸೂಕ್ತ ರಕ್ಷಣೆ ಇಲ್ಲದ್ದರಿಂದ ಬಾವಿಯೇ ಕೊಳೆತು ಹೋದಂತಿದೆ. ಹಾಗಾಗಿ ಬಾವಿಯೊಳಗೆ ಕೊಳೆತ ವಸ್ತುಗಳೇ ತುಂಬಿವೆ. ಇದರಿಂದ ಈ ಬಾವಿ ನೀರನ್ನು ಬಳಸದಂತಹ ಸ್ಥಿತಿ ತಲುಪಿದೆ.
ಇತ್ತೀಚಿನ ದಿನಗಳಲ್ಲಿ ಮಳೆ ಕಡಿಮೆಯಾಗಿದೆ, ಮಳೆ ಬಂದಾಗ ಮಳೆ ನೀರನ್ನೇ ಇವರೆಲ್ಲರೂ ಬಳಸುತ್ತಿದ್ದರು. ಆದ್ರೆ, ಇದೀಗ ಮಳೆಯೂ ಇಲ್ಲ, ನೀರೂ ಇಲ್ಲ. ಇಲ್ಲಿಂದ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿ ಖಾಸಗಿಯವರ ಬಾವಿಯೊಂದಿದ್ದು. ಅನಿವಾರ್ಯವಾದಾಗ ಅಲ್ಲಿಗೇ ತೆರಳುತ್ತಾರೆ. ಆದ್ರೆ, ವಯಸ್ಸಾದವರೇ ಇರುವ ಮನೆಗಳಲ್ಲಿ ಅದೂ ಸಾಧ್ಯವಿಲ್ಲದೆ ಪರದಾಡುವಂತಾಗಿದೆ. ತಮ್ಮ ಬಾವಿಯನ್ನು ಸ್ವಚ್ಛಗೊಳಿಸಿ ಅದಕ್ಕೆ ರಕ್ಷಣೆ ನೀಡಿ ಅಥವಾ ಹೊಸತೊಂದು ಬೋರ್ವೆಲ್ ಹಾಕಿಸಿಕೊಡಿ ಎಂದು ಎಷ್ಟು ಮನವಿ ಮಾಡಿದರೂ, ಇಲ್ಲಿನ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.