ಸಮಗ್ರ ನ್ಯೂಸ್: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಜಿಲ್ಲಾ ಕರ್ನಾಟಕ ಜನಪರ ವೇದಿಕೆ ರಾಮನಗರದಲ್ಲಿ ಬೆಳ್ಳಂಬೆಳಗ್ಗೆಯೇ ಪ್ರತಿಭಟನೆ ಆರಂಭಿಸಿದ್ದಾರೆ. ನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ಆರಂಭಗೊಂಡಿದ್ದು, ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಅಷ್ಟೇ ಅಲ್ಲದೆ ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಶ್ರದ್ಧಾಂಜಲಿ ಕೋರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಸ್ಟಾಲಿನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮತ್ತೆ ಹುಟ್ಟಿ ಬರಬೇಡಿ ಎಂದು ಘೋಷಣೆ ಕೂಗಿ ಸ್ಟಾಲಿನ್ ಅಣಕು ತಿಥಿ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ರಾಮನಗರ ಜಿಲ್ಲೆಯ ವಿವಿಧ ರೈತ ಹಾಗೂ ಕನ್ನಡಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಇಂದು ರಾಮನಗರ, ಚನ್ನಪಟ್ಟಣ, ಬಿಡದಿ ಸಂಪೂರ್ಣ ಸ್ತಬ್ಧವಾಗಲಿದೆ, ಮೆಡಿಕಲ್, ಆಸ್ಪತ್ರೆ, ಹಾಲಿನ ಅಂಗಡಿ, ರೇಷ್ಮೆ ಮಾರುಕಟ್ಟೆ ಹೊರತು ಪಡಿಸಿ ಉಳಿದೆಲ್ಲ ಸೇವೆ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಸಂಪೂರ್ಣ ಬಂದ್ ಆಗಲಿದೆ. ಬೆಳಗ್ಗೆ ಹತ್ತು ಗಂಟೆಗೆ ರಾಮನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮೌನ ಪ್ರತಿಭಟನೆ ನಡೆಸಲಿರುವ ಹೋರಾಟಗಾರರು, ಬಳಿಕ ಹಳೇ ಮೈಸೂರು-ಬೆಂಗಳೂರು ಹೆದ್ದಾರಿ ತಡೆ ನಡೆಸಲು ಸಿದ್ಧತೆ ನಡೆಸಿದ್ದಾರೆ.