ಸಮಗ್ರ ನ್ಯೂಸ್: ನೂತನ ಸಂಸತ್ತಿನಲ್ಲಿ ನಡೆದ ಮೊದಲ ಅಧಿವೇಶನದ ಪ್ರಯುಕ್ತ ಸಂಸದರಿಗೆ ನೀಡಿರುವ ಸಂವಿಧಾನದ ಪ್ರಸ್ತಾವನೆಯ ಪ್ರತಿಯಲ್ಲಿ ಜಾತ್ಯಾತೀತ ಮತ್ತು ಸಮಾಜವಾದಿ ಪದಗಳನ್ನು ತೆಗೆದುಹಾಕಲಾಗಿದೆ. ಇದಕ್ಕೆ ವಿರೋಧ ಪಕ್ಷಗಳು ಪ್ರತಿರೋಧ ವ್ಯಕ್ತಪಡಿಸಿದ್ದು, ಆಡಳಿತ ಪಕ್ಷವು ಸಂವಿಧಾನವನ್ನು ತಿರುಚಿ, ವಿರೂಪಗೊಳಿಸಿದೆ ಎಂದು ಟೀಕಿಸಿವೆ.
ಕೇಂದ್ರ ಸರ್ಕಾರದ ಈ ನಡೆಯನ್ನು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಬಹಿರಂಗ ಪಡಿಸಿದ್ದರು.
ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೆಘವಾಲ್ “ಸಂವಿಧಾನದ ಮೂಲ ಪ್ರತಿಯಲ್ಲಿ ಇರುವ ಪ್ರಸ್ತಾವನೆಯನ್ನು ಸಂಸದರಿಗೆ ವಿತರಿಸಲಾಗಿದ್ದು, ಸಮಾಜವಾದಿ ಮತ್ತು ಜಾತ್ಯಾತೀತ ಪದಗಳು ಅದರಲ್ಲಿ ಇರಲಿಲ್ಲ” ಎಂದಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಸಂವಿಧಾನದ ಪ್ರಸ್ತಾವನೆಯ ಪ್ರತಿಯನ್ನು ನೀಡುವುದಾದರೆ, ಪ್ರಸ್ತುತ ಇರುವ ಸಂವಿಧಾನದ ಪ್ರತಿಯನ್ನೇ ನೀಡಬೇಕು ಹೊರತು, ಹಳೆಯದಲ್ಲ ಎಂದು ಹೇಳಿವೆ.
ನೂತನ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ನಡೆಯುತ್ತಿದ್ದು ಸಂವಿಧಾನದ ಪ್ರಸ್ತಾವನೆ ಬದಲಾವಣೆ ವಿಚಾರ ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ.