ನಾವೆಲ್ಲಾ ಆಲ್ಜೀಮರ್ಸ್ ಬಗ್ಗೆ ಬಹಳಷ್ಟು ವಿಚಾರ ತಿಳಿದು ಕೊಂಡಿದ್ದರೂ, ಸಂಪೂರ್ಣವಾದ ನಿಖರವಾದ ಮಾಹಿತಿ ಯಾರ ಬಳಿಯೂ ಇಲ್ಲದಿರುವುದೇ ವಿಷಾದದ ವಿಚಾರ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳನ್ನು ಅಲ್ಜೀಮರ್ಸ್ ತಿಳುವಳಿಕಾ ತಿಂಗಳು ಮತ್ತು ಸೆಪ್ಟೆಂಬರ್ 21 ರಂದು ಅಲ್ಜೀಮರ್ಸ್ ತಿಳುವಳಿಕಾ ದಿನ ಎಂದು ಆಚರಿಸಿ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಹೆಚ್ಚಿನ ಜನರು ಈ ರೋಗ ಇಳಿ ವಯಸ್ಸಿನ ಜನರಲ್ಲಿ ಮಾತ್ರ ಬರುತ್ತದೆ ಎಂದು ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ತಮ್ಮ ಅತ್ಮೀಯರಿಗೆ ಹೀಗೊಂದು ರೋಗ ಬಂದಲ್ಲಿ ಮಾತ್ರ ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವಲ್ಲಿ ಆಸಕ್ತಿ ತಾಳುತ್ತಾರೆ. ಆಲ್ಜೀಮರ್ಸ್ ರೋಗ ವಯಸ್ಸಿನ ಜೊತೆ ಜೊತೆಯಾಗಿ ಬರುವ ಮರುಗುಳಿತನ ಎಂದರೆ ಖಂಡಿತವಾಗಿಯೂ ತಪ್ಪಾದೀತು. ಈ ರೋಗದಿಂದ ಬಳಲುವವರಲ್ಲಿ ಹೆಚ್ಚಿನವರು 65ರ ವಯಸ್ಸಿನ ಆಸುಪಾಸಿನಲ್ಲಿ ಇರುತ್ತಾರೆ. ಆದರೆ 40-50ರ ವಯಸ್ಸಿನಲ್ಲಿ ಬರಬಾರದೆಂದಿಲ್ಲ. ಬದಲಾಗುತ್ತಿರುವ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ನಿರಂತರ ಒತ್ತಡದ ವೃತ್ತಿ ಬದುಕು ಮತ್ತು ಯಾಂತ್ರಿಕೃತ ಬರಡು ಬದುಕು ಇತ್ಯಾದಿಗಳಿಂದಾಗಿ 40-50ರ ಆಸುಪಾಸಿನಲ್ಲಿಯೇ ಈ ರೋಗ ಬಂದರೂ ಆಶ್ಚರ್ಯವೇನಲ್ಲ. ಇತ್ತೀಚಿಗಂತೂ ‘ಗೋದಿಬಣ್ಣ ಸಾಧಾರಣ ಮೈಕಟ್ಟು’ ಎಂಬ ಕನ್ನಡ ಚಲನ ಚಿತ್ರವೂ ಈ ರೋಗದ ಬಗ್ಗೆ ಜನರಲ್ಲಿ ಹೆಚ್ಚಿನ ಕುತೂಹಲ ಹುಟ್ಟಿಸಿದೆ ಎಂದರೂ ತಪ್ಪಲ್ಲ.
ಸುಮಾರು 110 ವರ್ಷಗಳ ಹಿಂದೆ ಜರ್ಮನಿಯ ಪ್ರಾಂಕ್‍ಫರ್ಟ್‍ನಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಅಲೆಸ್ ಅಲ್ಜೀಮರ್ಸ್ ಎಂಬಾತ, ನಿಧಾನವಾಗಿ ನೆನಪಿನ ಶಕ್ತಿ ಮಸುಕಾಗುತ್ತಿರುವ ಮತ್ತು ತಾನೆಲ್ಲಿದ್ದೇನೆ ಎಂಬ ಸ್ಥಳದ ಪರಿಜ್ಞಾನವನ್ನೂ ಕಳೆದುಕೊಳ್ಳುತ್ತಿದ ರೋಗಿಯನ್ನು ಗುರುತಿಸಿದ. ವೃದ್ಯಾಪ್ಯದ ಹೊಸ್ತಿಲಿನಲ್ಲಿದ್ದ ಆಕೆಯಲ್ಲಿ ಈ ಮರೆಗುಳಿತನ ಕಾಣಿಸಿದ ಕೆಲವೇ ವರ್ಷಗಳಲ್ಲಿ ಆಕೆ ನಡೆಯಲಾರದೆ, ವಿಚಿತ್ರ ವರ್ತನೆ ತೋರುತ್ತಾ ಹಸಿವು, ನೀರಡಿಕೆ, ಮಲಮೂತ್ರ ವಿಸರ್ಜನೆ ಎಂಬ ಪರಿಜ್ಞಾನವನ್ನು ಕಳೆದುಕೊಳ್ಳುತ್ತಾ ಬಂದು, ಕೊನೆಗೊಂದು ದಿನ ಇಹಲೋಕ ತ್ಯಜಿಸಿದಳು. ಆಕೆಯ ಮೆದುಳನ್ನು ಕೂಲಂಕುಷವಾಗಿ ಪರೀಕ್ಷಿಸಿದಾಗ ಅಲ್ಲಿ ನರತಂತುಗಳ ರಚನೆ ಮತ್ತು ಆಕೃತಿ ವಿಭಿನ್ನವಾಗಿತ್ತು ಹಾಗೂ ಮುಪ್ಪಿನ ಪಕಳೆಗಳು ವಿಶೇಷವಾಗಿ ಮೆದುಳಿನಲ್ಲಿ ಕಾಣಸಿಕ್ಕವು. ಈ ರೀತಿಯ ಮರೆಗುಳಿತನದ ಭೌತಿಕ ಸ್ಥಿತಿಯನ್ನು ಅಲ್ಜೀಮರ್ ಖಾಯಿಲೆ ಎಂದು ಕರೆಯಲಾಯಿತು. ಒಟ್ಟಿನಲ್ಲಿ ದೇಹ ಮತ್ತು ಮನಸ್ಸು ಕೂಡ ಗಂಡ ಹೆಂಡಿರಂತೆ ಜೊತೆ ಜೊತೆಗೆ ಸಾಯುವುದಿಲ್ಲ ಎಂಬ ಚಾರ್ಲಸ್ ಕೋಲ್ಟನ್ ಎಂಬ ಲೇಖಕರ ಮಾತಿನಂತೆ, ಈ ಅಲ್ಜೀಮರ್ ರೋಗದಲ್ಲಿಯೂ ದೇಹಕ್ಕಿಂತ ಮೊದಲು, ಮೆದುಳು ನಶಿಸಿ ಹೋಗಿ ‘ಮರೆಗುಳಿತನ’ ಎಂಬ ವಿಚಿತ್ರ ಶೋಚನೀಯ ಖಾಯಿಲೆಗೆ ಮುನ್ನುಡಿ ಬರೆಯುತ್ತದೆ ಎಂದು ಸಂಶೋಧನೆಗಳು ಸಾರಿ ಹೇಳಿದೆ. ಡಿಮೆನ್ಷಿಯಾ ಎನ್ನುವುದು ಒಂದು ನಿರ್ದಿಷ್ಟ ಖಾಯಿಲೆ ಅಲ್ಲದಿದ್ದರೂ, ರೋಗಿಯ ನೆನಪು ಅಥವಾ ಇತರ ಯೋಚನಾ ಕೌಶಲ್ಯಗಳು ಕಡಮೆ ಆಗಿರುವ ಮತ್ತು ಈ ಕಾರಣದಿಂದ ಪ್ರತಿದಿನದ ಚಟುವಟಿಕೆಗಳನ್ನು ಮಾಡಲು ಆತನ ಸಾಮಥ್ರ್ಯ ಕಡಮೆ ಆಗಿರುವುದನ್ನು ವಿರ್ಮಷಿಸುವ ವ್ಯಾಪಕ ಶ್ರೇಣಿಯ ರೋಗ ಲಕ್ಷಣಗಳಿಗೆ ಸಂಬಂಧಿಸಿದ ಒಂದು ಸಮಗ್ರವಾದ ಶಬ್ದವಾಗಿರುತ್ತದೆ ಮತ್ತು ಅಲ್ಜೀಮರ್ ರೋಗದ ಪ್ರಾಥಮಿಕ ಲಕ್ಷಣವಾಗಿರುತ್ತದೆ.
ರೋಗದ ಲಕ್ಷಣಗಳು ಏನು?:-
ಅಲ್ಜೀಮರ್ ರೋಗ ದಿನ ಬೆಳಗಾಗುವುದಲ್ಲಿ ಬರುವ ರೋಗವಲ್ಲ. ನಿಧಾನವಾಗಿ ದೇಹದ ಸಂವೇಧನಾ ಮತ್ತು ನೆನಪು ಶಕ್ತಿಯನ್ನು ಆಪೋಶನ ತೆಗೆದುಕೊಳ್ಳುತ್ತದೆ. ಮನುಷ್ಯ ನಿಧಾನವಾಗಿ ಭಾವನಾ ಶೂನ್ಯವಾಗಿ ಬಾಹ್ಯ ಜಗತ್ತಿನಿಂದ ದೂರ ಸರಿಯುತ್ತಲೇ ಹೋಗುತ್ತಾನೆ. ಅಲ್ಜೀಮರ್ ಖಾಯಿಲೆ ಒಂದು ಸಂಕೀರ್ಣ ಖಾಯಿಲೆಯಾಗಿದ್ದು, ನೆನಪು ಮಸುಕಾಗಿ ಹೋಗಿ, ಹೊಸತನವನ್ನು ಕಲಿಯುವ ಮತ್ತು ಹಿಂದೆ ನಡೆದು ಹೋದದನ್ನು ನೆನಪಿಸಿಕೊಳ್ಳುವ ಸಾರ್ಮಥ್ಯ ಕಳೆದುಕೊಂಡಿರುತ್ತಾರೆ. ದೇಹಬಲ ಇದ್ದರೂ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಮತ್ತು ವ್ಯಕ್ತಿಗಳನ್ನು ಗುರುತಿಸುವುದು ಅಸಾಧ್ಯವಾಗುತ್ತದೆ. ಈ ರೋಗಿಗಳಿಗೆ ತಮ್ಮ ನೆನಪು ಶಕ್ತಿ ಕಳೆದು ಹೋಗಿದೆ ಎಂಬುದೇ ಗೊತ್ತಾಗುವುದಿಲ್ಲ. ತೀರ ಇತ್ತೀಚಿನ ಸಂಗತಿಗಳು ಮತ್ತು ಘಟನೆಗಳು ನೆನಪಿಗೆ ಬರುವುದಿಲ್ಲ. ಎಷ್ಟೋ ವರ್ಷಗಳ ಹಿಂದೆ ಜರುಗಿ ಹೋದ ಘಟನೆಯನ್ನು, ಇಲ್ಲವೇ ವ್ಯಕ್ತಿಯನ್ನು ಏಕಾಏಕಿ ನೆನಪಿಗೆ ತಂದುಕೊಳ್ಳುತ್ತಾರೆ. ಅವರು ತಮ್ಮ ಸುತ್ತಮುತ್ತಲಿನ ವಿಷಯಗಳ ಬಗ್ಗೆ ಸಂಪೂರ್ಣವಾಗಿ ನಿರಾಸಕ್ತರಾಗಿರುತ್ತಾರೆ. ಅವರ ಬಗ್ಗೆ ಅವರಿಗೆ ಏನೂ ಅನ್ನಿಸುವುದೇ ಇಲ್ಲ. ಸ್ಥಳ ಮತ್ತು ಸಮಯ ಪ್ರಜ್ಞೆ ಸಂರ್ಪೂಣವಾಗಿ ನಾಶವಾಗಿರುತ್ತದೆ. ಅವರ ವ್ಯಕ್ತಿತ್ವದಲ್ಲಿ ವಿಪರೀತ ಮಾರ್ಪಾಡಾಗಿ ವಿಷಯಗಳ ಪರ ವಿರೋಧಗಳು ತುಲನಾತ್ಮಕ ಸಾರ್ಮಥ್ಯವನ್ನು ಮಾಡಲು ಅಸಮರ್ಥರಾಗಿರುತ್ತಾರೆ. ಆ ಕಾರಣವಾಗಿ ಕುಳಿತಲ್ಲಿ ಕುಳಿತಿರದೆ, ನಿಂತಲ್ಲಿ ನಿಂತಿರದೆ, ಮನಬಂದಂತೆ ಗೊತ್ತು ಗುರಿಯಿಲ್ಲದೆ ನಡೆದಾಡುತ್ತಾರೆ. ನಿದ್ದೆ ಕಡಿಮೆಯಾಗಿ ಮಾನಸಿಕ ತಳಮಳ, ಖಿನ್ನತೆ, ಭ್ರಾಂತಿ ತೋರಿಬರುತ್ತದೆ. ಅವರ ಚಲನ ಸಾರ್ಮಥ್ಯ ರೋಗದ ಕೊನೆಯ ಹಂತದವರೆಗೂ ಸಮರ್ಪಕವಾಗಿರುತ್ತದೆ. ರೋಗ ಉಲ್ಬಣಿಸಿದಂತೆ. ಆಹಾರ ನೀರಿನ ಬಗ್ಗೆ, ಮಲ ಮೂತ್ರ ವಿಸರ್ಜನೆಯ ಪರಿಜ್ಞಾನವೂ ಅವರಲ್ಲಿ ಉಳಿಯುವುದಿಲ್ಲ. ಒಟ್ಟಿನಲ್ಲಿ ಅತ್ತರೆ ಅಳುತ್ತಲೇ ಇರುವ, ನಕ್ಕರೆ ನಗುತ್ತಲೇ ಇರುವ, ಮಗ, ಮಗಳು ಸೊಸೆ ಹೆಂಡತಿ ಬಂದು ಬಳಗವನ್ನೇ ಗುರುತಿಸಲಾಗದ ಭಾವನೆಗಳೇ ಇಲ್ಲದ ಬರಡು ಬದುಕು ಎಂದರೂ ತಪ್ಪಲ್ಲ.
- ಸಮಯ ಮತ್ತು ಸ್ಥಳದ ಬಗ್ಗೆ ಗೊಂದಲ ಉಂಟಾಗಬಹುದು. ತಾನು ಎಲ್ಲಿದ್ದೇನೆ ಎಂಬುದರ ಪರಿಜ್ಞಾನ ಇಲ್ಲದಿರಬಹುದು. ತೀರ್ಮಾನ ತೆಗೆದುಕೊಳ್ಳುವ ಸಾಮರ್ಥ ಕಡಮೆಯಾಗುವುದು ಅಥವಾ ಕಳಪೆ ತೀರ್ಮಾನ ತೆಗೆದುಕೊಳ್ಳುವುದು.
- ವಸ್ತುಗಳನ್ನು ಎಲ್ಲೆಲ್ಲಿ ಇಡುವುದು ಮತ್ತು ಅವುಗಳನ್ನು ಮತ್ತೆ ಹುಡುಕಿ ತೆಗೆಯುವ ಸಾರ್ಮಥ್ಯವನ್ನು ಕಳೆದುಕೊಳ್ಳುವುದು.
- ಮನೋಸ್ಥಿತಿ ಮತ್ತು ವ್ಯಕ್ತಿತ್ವದಲ್ಲಿ ಬದಲಾವಣೆ ಉಂಟಾಗುವುದು. ಕೆಲಸ ಮತ್ತು ಸಾಮಾಜಿಕ ಚಟುವಟಿಕೆಗಳಿಂದ ಹಿಂದೆ ಸರಿಯುವುದು.
- ಬರೆಯುವಾಗ ಮತ್ತು ಮಾತನಾಡುವಾಗ ಶಬ್ದಗಳಲ್ಲಿ ಹೊಸ ಸಮಸ್ಯೆ ಕಾಣಿಸಿಕೊಳ್ಳುವುದು.
- ಕಾಣುವಂತಹ ಬಿಂಬಗಳು ಮತ್ತು ಸ್ಥಳದ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದು.
- ನೆನಪಿನ ನಷ್ಟದಿಂದಾಗಿ ದೈನಂದಿನ ಚಟುವಟಿಕೆಯಲ್ಲಿ ಏರುಪೇರು ಉಂಟಾಗುವುದು. ಸಮಸ್ಯೆಗಳನ್ನು ಪರಿಹರಿಸಲು ಮತ್ತು ಯೋಜನೆಗಳನ್ನು ರೂಪಿಸಲು ಕಷ್ಟವಾಗುವುದು, ಈಗಾಗಲೇ ಪರಿಚಿತ ಇರುವ ಮನೆಕೆಲಸ, ಕಛೇರಿ ಕೆಲಸ ಅಥವಾ ಮುದ ನೀಡುವ ಕೆಲಸವನ್ನು ಪೂರೈಸಲು ಪೇಚಾಡುವುದು.
ಚಿಕಿತ್ಸೆ ಹೇಗೆ?:-
ಮೆದುಳಿನ ಸ್ಕ್ಯಾನ್ ಮಾಡಿಸಿ, ಮೆದುಳಿನ ರಚನೆ ಮತ್ತು ನರತಂತುಗಳ ಆಕೃತಿಗಳ ಬಗ್ಗೆ ವಿವರ ತಿಳಿದುಕೊಂಡು, ಮೆದುಳಿನಲ್ಲಿ ಉಂಟಾದ ಬದಲಾವಣೆಗಳನ್ನು ಗುರುತಿಸಲಾಗುತ್ತದೆ. ಇದರ ಜೊತೆಗೆ ರೋಗದ ಚರಿತ್ರೆಯ ವಿವರಗಳು, ಕೌಟುಂಬಿಕ ಹಿನ್ನಲೆ ಮತ್ತು ವ್ಯಕ್ತಿಯ ಜೀವನಶೈಲಿ, ಆಹಾರ ಪದ್ಧತಿಯನ್ನು ಸಮಗ್ರವಾಗಿ ಅಭ್ಯಸಿಸಿ ರೋಗದ ನಿರ್ಣಯವನ್ನು ಮಾಡಲಾಗುತ್ತದೆ. ರೋಗಿಯ ದೈನಂದಿನ ಚಲನವಲನ, ವರ್ತನೆಗಳನ್ನು ಸಿಟಿಸ್ಕ್ಯಾನ್‍ನ ಜೊತೆ ಹೊಂದಾಣಿಕೆ ಮಾಡಿ ರೋಗವನ್ನು ಗುರುತಿಸಿ ವೈದ್ಯರು ಚಿಕಿತ್ಸೆಯನ್ನು ನಿರ್ಧರಿಸುತ್ತಾರೆ. ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಅಸಾಧ್ಯ. ಆದರೆ ಕೆಲವೊಮ್ಮೆ ರೋಗಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮಿಥ್ಯಮಾತ್ರೆಗಳನ್ನು ನೀಡಲಾಗುತ್ತದೆ. ಒಟ್ಟಿನಲ್ಲಿ ರೋಗಿಯ ತಿಳಿವಳಿಕೆಯ ಮಟ್ಟವನ್ನು ಹೆಚ್ಚಿಸಲು ಮತ್ತು ಅವರು ತೋರ್ಪಡಿಸುವ ಖಿನ್ನತೆ, ತಳಮಳ, ನಿದ್ರಾಹೀನತೆ, ಮನೋವಿಕಾರದಂತಹ ವರ್ತನೆಯ ಬದಲಾವಣೆಗಳನ್ನು ಕಡಮೆ ಮಾಡುವ ಪ್ರಯತ್ನ ಚಿಕಿತ್ಸೆಯ ಪರಮೋಚ್ಛ ಧ್ಯೇಯವಾಗಿರುತ್ತದೆ.
ಏನು ಮಾಡಬೇಕು?
- ಅಲ್ಜೀಮರ್ ರೋಗಿಗಳನ್ನು ಎಲ್ಲರಂತೆ ಉಪಚರಿಸಬೇಕು. ಅವರನ್ನು ಕೀಳಾಗಿ ಕಾಣಲೇಬಾರದು. ಆರಂಭಿಕ ಹಂತದಲ್ಲಿ ಈ ರೋಗಿಗಳು ಇತರ ಎಲ್ಲರಂತೆ ಎಲ್ಲರೊಡನೆ ಬೆರೆಯಲು, ಊರು ಸುತ್ತಲು ಬಯಸುತ್ತಾರೆ. ಅವರನ್ನು ಸಮಾಜದ ಮುಖ್ಯವಾಹಿನಿಯಿಂದ ದೂರವಿಡಲೇ ಬಾರದು. ಅವರ ಆತ್ಮಸೈರ್ಯಕುಸಿಯುವಂತ ಯಾವುದೇ ಕೆಲಸ ಮಾಡಬಾರದು.
- ಅವರನ್ನು ಅತಿಯಾದ ಕಾಳಜಿ ಮತ್ತು ಪ್ರೀತಿಯಿಂದ ಕಾಣಬೇಕು. ಕಡಮೆ ಶಬ್ದದ ಚಿಕ್ಕ ಚಿಕ್ಕ ವಾಕ್ಯಗಳಿಂದ ಅವರನ್ನು ಸಂಬೋಧಿಸಬೇಕು. ದೇಹದ ಭಾಷೆಯಿಂದ ಅವರೊಡನೆ ವ್ಯವಹರಿಸಬೇಕಾದಬಹುದು. ಮಾತಿನ ಭಾಷೆ ಅರಿವಾಗದಿದ್ದರೂ ದೇಹದ ಭಾಷೆ ಹೆಚ್ಚು ಪರಿಣಾಮಕಾರಿ.
- ಈ ರೋಗಿಗಳ ಜೊತೆ ವಾದ ಮಾಡಬೇಡಿ ಅವರು ಹೇಳಿದ ಮಾತುಗಳನ್ನು ಸುಮ್ಮನೆ ಒಪ್ಪಿಕೊಳ್ಳಿ.
- ಅವರ ಜೊತೆ ಸಾವಧಾನವಾಗಿ, ಪ್ರೀತಿಯಿಂದ ನಡೆದುಕೊಳ್ಳಿ. ಅವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿ, ಮನೋಸ್ಥಿತಿಯನ್ನು ಕುಂದಿಸಬೇಡಿ. ನಾಳೆ ನಿಮಗೂ ಅದೇ ಸ್ಥಿತಿ ಬರಬಹುದು. ಅವರು ಯಾವಾತ್ತಾದರೂ ಚಿಂತೆಯಿಂದ ಗೊಂದಲದಿಂದ ಇದ್ದಲ್ಲಿ ಸಮಾಧಾನದಿಂದ ವ್ಯವಹರಿಸಿ. ಅವರ ಜೊತೆ ಅತ್ಯಂತ ಗೌರವಯುತವಾಗಿ ವ್ಯವಹರಿಸಿ.
- ಆದಷ್ಟು ಅವರನ್ನು ದೈಹಿಕ ಚಟುವಟಿಕೆಯಲ್ಲಿ ಇರುವಂತೆ ನೋಡಿಕೊಳ್ಳಿ. ಆದಷ್ಟು ನಿಮ್ಮ ಪರಿಚಯ, ಸಮಯದ ಬಗ್ಗೆ ಅರಿವು ಮೂಡಿಸಿ ಅವರಿಗೆ ಹೆಚ್ಚಿನ ಮನೋಸ್ಥೆರ್ಯ ನೀಡಬೇಕು.
ಏನು ಮಾಡಬಾರದು?:-
- ಅವರ ಜೊತೆ ವಾದ ಮಾಡಬೇಡಿ. ಅವರು ಹೇಳಿದ ವಿಚಾರಗಳು ತಪ್ಪಿದ್ದರೂ ಖಡ್ಡಾಯವಾಗಿ ಖಂಡಿಸಬೇಡಿ. ಮೌನವಾಗಿ ಒಪ್ಪಿಕೊಳ್ಳಿ.
- ಪದೇ ಪದೇ ನೀವು ಯಾರು ಎಂಬುದನ್ನು ಅವರ ಬಳಿ ಕೇಳಿ ಅವರನ್ನು ಮತ್ತಷ್ಟು ಗೊಂದಲಕ್ಕೆ ತಳ್ಳಬೇಡಿ.
- ಅವರಿಂದ ಇತರರಿಗೆ ತೊಂದರೆ, ಮುಜುಗರ ಆಗುತ್ತದೆ ಎಂದು ರೂಮಿನೊಳಗೆ ಕೂಡಿ ಹಾಕಬೇಡಿ.
ಹೊರ ಜಗತ್ತಿನಿಂದ ಅವರನ್ನು ದೂರವಿಡಬೇಡಿ, ಎಲ್ಲರೊಂದಿಗೆ ಅವರನ್ನು ಇರಲು ಬಿಡಿ. ನಿಮ್ಮ ಕುಟುಂಬದವರಲ್ಲಿ ಈ ರೀತಿಯ ‘ಮರೆಗುಳಿ’ ರೋಗಿ ಇದ್ದಾರೆ ಎಂಬ ಸಂಕೋಚ ಬಿಟ್ಟುಬಿಡಿ, ಯಾಕೆಂದರೆ ಅವರಿಗೆ ಅವರು ಯಾರು ಎಂಬ ಪರಿಜ್ಞಾನವೇ ಇರುವುದಿಲ್ಲ. ನಾಳೆ ನಿಮಗೂ ಅದೇ ಸ್ಥಿತಿ ಬರಬಹುದು. - ಅಲ್ಜೀಮರ್ ರೋಗಿಗಳನ್ನು ಯಾವಾತ್ತೂ ಬಯ್ಯಬೇಡಿ, ದ್ವೇಷಿಸಬೇಡಿ. ಆದಷ್ಟು ಸಂಯಮದಿಂದ ವ್ಯವಹರಿಸಿ, ಪ್ರೀತಿಯಿಂದ ಮತ್ತು ಕರುಣೆಯಿಂದ ವರ್ತಿಸಿ. ಸಾಧ್ಯವಾದಷ್ಟು ಪ್ರಿತಿಯನ್ನು ನೀಡಿ ಗೌರವಿಸಿ.
ಕೊನೆ ಮಾತು:-
ಮೆದುಳು ನಮ್ಮ ದೇಹದ ಅತ್ಯಂತ ಮಹತ್ವದ ಅಂಗ. ಅತೀ ಜವಾಬ್ದಾರಿಯುತವಾದ ಕಾರ್ಯವೆಸಗುವ ಮೆದುಳಿಗೆ ನೂರಾರು ಕೆಲಸಗಳಿದ್ದು ದೇಹದ ಐಚ್ಚಿಕ ಚಲನವಲನಗಳು, ನೆನಪುಗಳ ಜೋಡಣೆ ಸಂಗ್ರಹ, ವೈಚಾರಿಕ ಶಕ್ತಿಯ ಚಿಂತನೆ, ಭಾವನೆಗಳು ತವರೂರು, ಅರ್ಥ ವಿಶ್ಲೇಷಣೆ, ಸಂವೇಧನೆಗಳ ಗಣಿ ಹೀಗೆ ನೂರೊಂದು ಜವಾಬ್ದಾರಿಗಳನ್ನು ಏಕಕಾಲಕ್ಕೆ ಕರಾರುವಕ್ಕಾಗಿ ಮಾಡುತ್ತಿರುತ್ತದೆ. ಈ ಅದ್ಭುತವಾದ ನರವ್ಯೂಹ ಮಂಡಲ ರಚನೆಯಾಗಿರುವುದು ಚಿಕ್ಕಚಿಕ್ಕ ನರತಂತುಗಳು ಜಾಡಿನಿಂದ. ಈ ನರತಂತುಗಳ ಕಾರ್ಯನಿರ್ವಹಣೆಗೆ ರಾಸಾಯನಿಕ ನರವಾಹಕಗಳು ಸೂಕ್ತ ಸ್ರವಿಸುವಿಕೆ ಮತ್ತು ಸ್ಪಂದನದ ಅವಶ್ಯಕತೆ ಅತಿಯಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಏನಾದರೂ ವ್ಯತ್ಯಯವಾದಲ್ಲಿ, ಮೆದುಳಿನ ಸಂವಹನ ಕ್ರಿಯೆಯಲ್ಲಿ ಏರುಪೇರಾಗಿ, ನೂರಾರು ತೊಂದರೆಗಳಿಗೆ ಕಾರಣವಾಗುತ್ತದೆ. ಕೆಲವೊಮ್ಮೆ ಅಮೈಲಾಯ್ಡ ಎಂಬ ಪ್ರೋಟಿನ್ ಅತಿಯಾಗಿ ಮೆದುಳಿನ ನರತಂತುಗಳ ನಡುವೆ ಸೇರಿಕೊಂಡು ಮೆದುಳಿನ ಕಾರ್ಯಕ್ಷಮತೆಯನ್ನು ಕ್ಷೀಣಿಸುತ್ತದೆ ಎಂದು ತಿಳಿದು ಬಂದಿದೆ. ವಿಶ್ವ ಸಂಸ್ಥೆಯ ಅಂದಾಜಿನ ಪ್ರಕಾರ ವಿಶ್ವದಾದ್ಯಂತ ಸುಮಾರು 20 ದಶಲಕ್ಷ ಜನರು ಈ ರೋಗದಿಂದ ಬಳಲುತ್ತಿದ್ದಾರೆ ಮತ್ತು ಭಾರತ ದೇಶವೊಂದರಲ್ಲಿಯೇ 4 ದಶಲಕ್ಷ ಮಂದಿ ಬಳಲುತ್ತಿದ್ದಾರೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ. 2025ರ ಹೊತ್ತಿಗೆ ಈ ಸಂಖ್ಯೆ ದ್ವಿಗುಣವಾಗುವ ಸಾಧತ್ಯೆ ನಿಚ್ಚಳವಾಗಿದೆ. ಅಲ್ಜೀಮರ್ ರೋಗವನ್ನು ತಡೆಗಟ್ಟುವುದು ಸುಲಭದ ಮಾತಲ್ಲ, ಅದೇ ರೀತಿ ಚಿಕಿತ್ಸೆ ಕೂಡಾ ತುಂಬ ಕ್ಲಿಷ್ಟಕರವಾಗಿದೆ. ರೋಗಿಗಳ ತಿಳುವಳಿಕೆಯನ್ನು ಉತ್ತಮ ಪಡಿಸಲು ಮತ್ತು ಜನರು ವ್ಯಕ್ತ ಪಡಿಸುವ ಖಿನ್ನತೆ, ತಳಮಳ ನಿದ್ರಾಹೀನತೆ, ಮನೋವಿಕಾರದಂತಹ ವರ್ತನೆಯ ಬದಲಾವಣೆಗಳನ್ನು ಕಡಮೆ ಮಾಡುವ ಪ್ರಯತ್ನ ಚಿಕಿತ್ಸೆಯ ಪ್ರಮುಖ ಗುರಿಯಾಗಿರುತ್ತದೆ. ಈ ರೋಗಿಗಳ ಚಿಕಿತ್ಸೆಯಲ್ಲಿ, ಅವರ ಕುಟುಂಬ ವರ್ಗದ ಪಾತ್ರ ಅತ್ಯಂತ ಹಿರಿದು, ಅವರು ರೋಗಿಯ ದೈನಂದಿನ ಕಾರ್ಯಚಟುವಟಿಕೆಗಳನ್ನು ಕಾಯ್ದಿರಿಸಿ, ಅವರ ಆಹಾರ, ಪಾನೀಯ, ದೇಹ ಶುದ್ಧಿ, ನೆರ್ಮುಲ್ಯ ಕಾಯ್ದುಕೊಳ್ಳುವಿಕೆ, ಔಷಧಿ ಸೇವನೆಯತ್ತ ಹೆಚ್ಚಿನ ಆಸಕ್ತಿ, ಶ್ರದ್ಧೆ ಮತ್ತು ನಿಗಾ ವಹಿಸಬೇಕು. ರೋಗಿ ಕುಟುಂಬಸ್ಥರನ್ನು ಸಂಪೂರ್ಣವಾಗಿ ಅವಲಂಬಿತವಾಗಿರುವುದರಿಂದ, ಕುಟುಂಬಸ್ಥರ ಜವಾಬ್ದಾರಿ ಹೆಚ್ಚಾಗಿರುತ್ತದೆ. ರೋಗ ಬರದಂತೆ ತಡೆಗಟ್ಟಲು ಸಾಧ್ಯವಿಲ್ಲದಿದ್ದರೂ, ಉತ್ತಮ ಜೀವನಶೈಲಿ, ಆಹಾರ ಪದ್ಧತಿ, ಆರೋಗ್ಯಕರ ಆಹಾರ, ಉತ್ತಮ ದೈಹಿಕ ವ್ಯಾಯಾಮ, ಹೊಸ ಹೊಸ ವಿಷಯಗಳ ಕಲ್ಪನೆ, ನಿದ್ರೆಕಡೆ ಗಮನ, ಒತ್ತಡ ನಿರ್ವಹಣೆ, ಸಮಾಜಮುಖಿ ಚಿಂತನೆ ಮತ್ತು ಜೀವನ ಇವುಗಳತ್ತ ಹೆಚ್ಚು ಮುಖ ಮಾಡಿದಲ್ಲಿ ದೇಹಕ್ಕೆ ವಯಸ್ಸಾದರೂ ಮೆದುಳು ಉಲ್ಲಸಿತವಾಗಿರುವ ಸಾಧ್ಯತೆ ಹೆಚ್ಚಾಗಿ, ಆರುವತ್ತರ ಆಸುಪಾಸಿನವರಲ್ಲಿ ಬರುವ ಅರುಳು ಮರುಳು ಅಲ್ಜೀಮರ್ ರೋಗ ಬರದಿರುವ ಸಾಧ್ಯತೆ ಕಡಮೆ ಇರುತ್ತದೆ. ಹೀಗೆ ಮಾಡುವುದರಿಂದ ಆರೋಗ್ಯವಂಥ ಸಮಾಜ ನಿರ್ಮಾಣವಾಗುವುದರಲ್ಲಿ ಸಂದೇಹವೇ ಇಲ್ಲ. ಸಪ್ಟೆಂಬರ್ ತಿಂಗಳನ್ನು ಅಲ್ಜೀಮರ್ ರೋಗದ ಜಾಗೃತಿ ತಿಂಗಳು ಎಂದು ಆಚರಿಸಲಾಗುತ್ತದೆ. ಮತ್ತು ಸಪ್ಟೆಂಬರ್ 21ನ್ನು ವಿಶ್ವ ‘ಅಲ್ಜೀಮರ್ ದಿನ’ ಎಂದು ಆಚರಿಸಿ ಜನರಲ್ಲಿ ಅಲ್ಜೀಮರ್ ರೋಗದ ಬಗ್ಗೆ ಜಾಗೃತಿ ಮತ್ತು ಅರಿವನ್ನು ಮೂಡಿಸುವ ಕೆಲಸ ವಿಶ್ವದಾದ್ಯಂತ ನಡೆಸಲಾಗುತ್ತದೆ. ಈ ಆಚರಣೆ ಮಾಡುವುದರ ಜೊತೆಗೆ ಈ ರೋಗದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸಾಕಷ್ಟು ಮಾನಸಿಕ ಸ್ಥರ್ಯ ಧೈರ್ಯ ಮತ್ತು ಸಾಂತ್ವನ ನೀಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಹೆಚ್ಚು ಹೆಚ್ಚು ನಡೆಯಬೇಕು. ಹಾಗಾದಲ್ಲಿ ಮಾತ್ರ ಈ ಆಚರಣೆ ಹೆಚ್ಚು ಅರ್ಥಪೂರ್ಣವಾದೀತು.
ಡಾ|| ಮುರಲೀ ಮೋಹನ್ ಚೂಂತಾರು
BDS, MDS,DNB,MOSRCSEd(U.K), FPFA, M.B.A
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು
ಮೊ : 9845135787
MDS,DNB,MOSRCSEd(U.K), FPFA, M.B.A
[email protected]
[email protected]