ಸಮಗ್ರ ನ್ಯೂಸ್ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರತಂದಿರುವ, ಮಿಷನರಿಗಳಾದ ರೆ. ಹರ್ಮನ್ ಮ್ಯೋಗ್ಲಿಂಗ್ ಮತ್ತು ರೆ. ಗಾಟ್ ಫ್ರೈಡ್ ವೈಗಲ್ ವರದಿಯ ಅನುವಾದಿತ ‘ಮಿಷನರಿ ಪ್ರವಾಸ – ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ’ ಕೃತಿ 1840ರ ಸುಬ್ರಹ್ಮಣ್ಯದ ಕಥೆಯನ್ನು ಹೇಳುತ್ತದೆ.
1840ರ ನವೆಂಬರ್ 18 ರಂದು ಮಂಗಳೂರಿನಿಂದ ಹೊರಡುವ ಮ್ಯೋಗ್ಲಿಂಗ್ ಮತ್ತು ವೈಗಲ್ ಫರಂಗಿಪೇಟೆ, ಬಂಟ್ವಾಳ, ಕಾರಿಂಜ, ಗುರುವಾಯನಕೆರೆ, ಧರ್ಮಸ್ಥಳ, ಕೊಕ್ಕಡ, ಕುಲ್ಕುಂದ ಮಾರ್ಗವಾಗಿ ಸುಬ್ರಹ್ಮಣ್ಯ ತಲುಪುತ್ತಾರೆ. ನಂತರ ಸುಳ್ಯ, ಅಡೂರು, ಕಾಸರಗೋಡು ಮಾರ್ಗವಾಗಿ ಮಂಗಳೂರು ತಲುಪುತ್ತಾರೆ.
ಕ್ರೈಸ್ತ ಧರ್ಮದ ಪ್ರಚಾರಕರಾಗಿ ಬಾಸೆಲ್ ಮಿಶನ್ ಸೂಚನೆಯ ಮೇರೆಗೆ ಸುಬ್ರಹ್ಮಣ್ಯಕ್ಕೆ ಬರುವ ಮಿಷನರಿಗಳು, ತಮ್ಮ ಪ್ರವಾಸ ಕಥನವನ್ನು ವರದಿಯ ರೂಪದಲ್ಲಿ ಬರೆಯುತ್ತಾರೆ. ಆ ವರದಿಯ ಅನುವಾದಿತ ಕೃತಿಯೇ ‘ಮಿಷನರಿ ಪ್ರವಾಸ – ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ’
ಮುಖ್ಯವಾಗಿ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯದ ಆಚರಣೆಗಳ ಕುರಿತಾಗಿ ಈ ಕೃತಿ ವಿವರಿಸುತ್ತದೆ. ಕುಲ್ಕುಂದದ ಜಾನುವಾರು ಜಾತ್ರೆ, ಧರ್ಮಸ್ಥಳದ ಲಕ್ಷ ದೀಪೋತ್ಸವ, ಸುಬ್ರಹ್ಮಣ್ಯದ ಷಷ್ಠಿ ಉತ್ಸವ, ಮಡೆಸ್ನಾನ ಪದ್ದತಿಯ ಕುರಿತು ಕೃತಿಯಲ್ಲಿ ಉಲ್ಲೇಖ ಸಿಗುತ್ತದೆ.
ಈ ಎಲ್ಲಾ ಆಚರಣೆಗಳ ನಡುವೆ ಕ್ರೈಸ್ತ ಧರ್ಮದ ಪ್ರಚಾರ, ನಡುವೆ ನೂರಾರು ಚರ್ಚೆಗಳು, ಬೈಬಲ್ ಪ್ರತಿ ಹಂಚುವ ಕುರಿತು ಮಾಹಿತಿಯನ್ನು ಮಿಷನರಿಗಳು ತಿಳಿಸುತ್ತಾರೆ.
ಮಿಷನರಿಗಳ ಕೈಯಲ್ಲಿ ಇದ್ದ ಪುಸ್ತಕಗಳು, ಪೆನ್, ಪೆನ್ಸಿಲ್, ಗಡಿಯಾರ, ಬರೆಯುವ ಮೇಜು ಇವೆಲ್ಲವನ್ನೂ ಹಳ್ಳಿಯ ಜನರು ಮುಗ್ದರಾಗಿ ನೋಡುತ್ತಿದ್ದಂತಹ ಹಲವಾರು ವಿಚಾರಗಳು ಪುಸ್ತಕದಲ್ಲಿ ಕಾಣ ಸಿಗುತ್ತವೆ.
ಪ್ರೊ ಎ. ವಿ. ನಾವಡ ಮತ್ತು ನಂದಕಿಶೋರ್ ಎಸ್. ಅನುವಾದ ಮಾಡಿರುವ ಈ ಕೃತಿ 1840ರ ಕಾಲದ ದಕ್ಷಿಣ ಕನ್ನಡದ ಸ್ಥಿತಿಗತಿಗಳನ್ನು ತೆರೆದಿಡುತ್ತಿರುವುದಂತೂ ಖಚಿತ