ಸುಳ್ಯ: ಮೊಗ್ರ, ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಪುಟ್ಟ ಹಳ್ಳಿ. ಸುಮಾರು 2 ರಿಂದ 3 ಸಾವಿರ ಜನ ಈ ಹಳ್ಳಿಯಲ್ಲಿ ವಾಸವಿರುವ ಜನ. ಏರಣಗುಡ್ಡೆ, ಮಲ್ಕಜೆ, ಮೊಗ್ರ, ಕಮಿಲ ಈ ಹಳ್ಳಿಯ ವ್ಯಾಪ್ತಿಗೆ ಬರುವ ಪ್ರದೇಶಗಳು.
ಶಾಲೆ, ಮತದಾನ ಕೇಂದ್ರ, ಅಂಗನವಾಡಿ, ಆರೋಗ್ಯ ಉಪಕೇಂದ್ರ, ದೈವಸ್ಥಾನ ಮೊದಲಾದವುಗಳ ಒಂದು ಕಂಪ್ಲೀಟ್ ಪ್ಯಾಕೇಜ್ ಈ ಹಳ್ಳಿಯದ್ದು. ಆದರೆ ಇವುಗಳೆಲ್ಲದರ ಸಂಪರ್ಕಕ್ಕೆ ಅಡ್ಡಿಯಾಗಿತ್ತು ಆ ಸೇತುವೆ ಇಲ್ಲದ ಹೊಳೆ.
ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆಗೆ ಅಡಿಕೆ ಮರದ ಪಾಲ ಹಾಕಿ ಹಾಗೋಹೀಗೋ ಜೀವ ಕೈಲಿ ಹಿಡಿದು ದಾಟುತ್ತಿದ್ದ ಮಂದಿ ನಮ್ಮೂರಿಗೊಂದು ಸೇತುವೆ ಬಂದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ದಿನಂಪ್ರತಿ ಕನಸು ಕಾಣ್ತಿದ್ರು.
ಇದಕ್ಕಾಗಿ ಪಂಚಾಯತ್ ನಿಂದ ಹಿಡಿದು ಪ್ರಧಾನಮಂತ್ರಿವರೆಗೆ ಎಲ್ಲರಿಗೂ ಮನವಿ ಸಲ್ಲಿಸಿದ್ದೇ ಸಲ್ಲಿಸಿದ್ದು. ಇವರ ಮನವಿಗೆ ಚುನಾವಣೆ ಬಂದಾಗಲೆಲ್ಲಾ ಭರವಸೆಗಳ ಮಹಾಪೂರವೇ ಹರಿದು ಬರ್ತಾ ಇತ್ತು. 3- 4 ದಶಕಗಳಿಂದ ಕಾಣುತ್ತಿದ್ದ ಕನಸನ್ನು ಈಡೇರಿಸಲು ಯಾವೊಬ್ಬ ಜನಪ್ರತಿನಿಧಿಯಿಂದಲೂ ಸಾಧ್ಯವಾಗಿರಲಿಲ್ಲ. ಯಾಕೆಂದರೆ ಎಲ್ಲಾ ಕಡೆ ಜಾತಿ ಧರ್ಮಗಳು ಓಟ್ ಬ್ಯಾಂಕ್ ಆದ್ರೆ ಇಲ್ಲಿ ಈ ಸೇತುವೆಯ ಇಶ್ಯೂ ಓಟ್ ಬ್ಯಾಂಕ್ ಆಗಿತ್ತು.
ಇವತ್ತಾಗುತ್ತೆ, ನಾಳೆ ಆಗುತ್ತೆ ಅಂತ ಪಂಚಾಯತ್ ಸದಸ್ಯನಿಂದ ಹಿಡಿದು, ಶಾಸಕ, ಸಂಸದ, ಸಚಿವರು ಭರವಸೆ ನೀಡಿದ್ದೇ ನೀಡಿದ್ದು. ಯಾರೊಬ್ಬರೂ ಸೇತುವೆಯ ಕಾರ್ಯಕ್ಕೆ ಮುಂದಾಗಿರಲಿಲ್ಲ.
ಕಳೆದ ವರ್ಷ ಹೆಮ್ಮೆಯ ಪ್ರಧಾನಿಗಳ ಕಾರ್ಯಾಲಯಕ್ಕೂ ಈ ದುರಂತ ವ್ಯಥೆಗಳ ಸಾಕ್ಷಚಿತ್ರವನ್ನು ಕಳಿಸಲಾಗಿತ್ತು. ಅಲ್ಲಿಯೂ ಈ ಊರ ಜನಕ್ಕೆ ನ್ಯಾಯ ಸಿಗಲಿಲ್ಲ. ಇನ್ನು ಯಾರನ್ನೂ ನಂಬಿದರೂ ಪ್ರಯೋಜನವಿಲ್ಲ ಎಂದರಿತ ಮಂದಿ ತಾವೇ ಶಾಶ್ವತ ಕಾಲು ಸೇತುವೆಯೊಂದನ್ನು ರಚಿಸಲು ನಿರ್ಧರಿಸಿ, ಜನಪ್ರತಿನಿಧಿಗಳಿಂದ ಆಗದ ಕಾರ್ಯವನ್ನು ತಿಂಗಳೊಳಗೆ ಮಾಡಿ ಮುಗಿಸಿದ್ದಾರೆ.
ಸುಮಾರು ಒಂದೂವರೆ ಲಕ್ಷದ ಅಂದಾಜು ಬಜೆಟ್ ತಯಾರಿಸಿ ಜೂ. 4 ರಂದು ಸೇತುವೆ ರಚನೆಯ ಪ್ಲಾನ್ ಮಾಡಿದ ಜನ್ರು ಜೂನ್ 24ಕ್ಕೆ ಸೇತುವೆಯನ್ನು ರಚಿಸಿಯೇ ಬಿಟ್ಟಿದ್ದಾರೆ.
ಸೇತುವೆಗಳ ಸರದಾರ ಪದ್ಮಶ್ರೀ ಗಿರೀಶ್ ಭಾರದ್ವಾಜ್ ರ ಮಗ ಪತಂಜಲಿ ಭಾರದ್ವಾಜ್ ನೇತೃತ್ವದಲ್ಲಿ ಕಾಮಗಾರಿ ಪೂರ್ಣಗೊಂಡು ಜನಸಂಚಾರಕ್ಕೆ ಮುಕ್ತವಾಗಿದೆ. ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದು, ತಮ್ಮ ಕನಸುಗಳನ್ನು ತಾವಾಗಿಯೇ ಈಡೇರಿಸಿಕೊಂಡ ಮೊಗ್ರ ಜನತೆಯ ಸಾಧನೆಗೆ ಭೇಶ್ ಅನ್ನಲೇಬೇಕು. ಜೊತೆಗೆ ಪೊಳ್ಳು ಭರವಸೆಗಳ ನಾಯಕರಿಗೆ ನಾಚಿಕೆಯಾಗಬೇಕು.
ಅಂದಹಾಗೆ ಜನರ ಸೇತುವೆ ರಚನೆ ತೀರ್ಮಾನಕ್ಕೆ ಎಲ್ಲೆಡೆಯಿಂದ ನೆರವು ಕೂಡಾ ಹರಿದುಬಂದಿತ್ತು. ಸೇತುವೆ ರಚನೆಗೆ ಈ ಊರಿನ ಭರವಸೆಯ ಗ್ರಾಮ ಭಾರತ ಎಂಬ ಆಶೋತ್ತರದ ತಂಡವೊಂದು ಕೆಲಸ ಮಾಡಿದ್ದನ್ನು ಜನ ಮರೆಯೋದಿಲ್ಲ. ನೆರವು ನೀಡಿದ ಕೈಗಳು ಸದಾಕಾಲವೂ ಸುಖವಾಗಿರಲಿ ಎಂದು ಹಾರೈಸುತ್ತಿದ್ದಾರೆ.