ಸಮಗ್ರ ನ್ಯೂಸ್: ಮುಸ್ಲಿಂ ಮಹಿಳೆಯೋರ್ವರಿಗೆ ಆಕೆಯ ಗಂಡ ವಿದೇಶದಿಂದಲೇ ವಾಟ್ಸಾಪ್ ಮೂಲಕ ತಲಾಖ್ ನೀಡಿದ್ದು, ಇದನ್ನು ಪ್ರಶ್ನಿಸಿ ಮಹಿಳೆ ಠಾಣೆ ಮೆಟ್ಟಿಲೇರಿದ ಘಟನೆ ಸುಳ್ಯದ ಜಯನಗರ ಎಂಬಲ್ಲಿಂದ ವರದಿಯಾಗಿದೆ.
ಜಯನಗರದ ಮಿಸ್ರಿಯಾ ಎಂಬ ಮಹಿಳೆಗೆ ವಿದೇಶದಲ್ಲಿರುವ ಪತಿ ವಾಟ್ಸಪ್ ಸಂದೇಶದ ಮೂಲಕ ತ್ರಿವಳಿ ತಲಾಖ್ ನೀಡಿರುವ ಘಟನೆ ವರದಿಯಾಗಿದೆ.
ಕೇರಳ ತ್ರಿಶೂರ್ ಮೂಲದ ಅಬ್ದುಲ್ ರಾಶಿದ್ ಎಂಬವರು ಏಳು ವರ್ಷಗಳ ಹಿಂದೆ ಸುಳ್ಯ ಜಯನಗರದ ಮಿಸ್ರಿಯ ಎಂಬ ಯುವತಿಯನ್ನು ವಿವಾಹವಾಗಿದ್ದರು.
ವಿವಾಹದ ಬಳಿಕ ಆಕೆಯನ್ನು ಉತ್ತಮವಾಗಿ ನೋಡಿಕೊಂಡಿದ್ದು ಅವರಿಗೆ ಇದೀಗ ಎರಡು ಹೆಣ್ಣುಮಕ್ಕಳು ಕೂಡ ಇದ್ದಾರೆ. ೨ ವರ್ಷಗಳ ಮೊದಲು ತನ್ನ ಪತ್ನಿಯನ್ನು ವಿದೇಶಕ್ಕೆ ಕರೆಸಿಕೊಂಡಿದ್ದರು. ಬಳಿಕ ಎರಡನೇ ಮಗುವಿನ ಹೆರಿಗೆಗಾಗಿ ಅವರನ್ನು ಸುಳ್ಯಕ್ಕೆ ಕರೆತಂದು ಪತ್ನಿಯ ಮನೆಯಲ್ಲಿ ಬಿಟ್ಟು ವಿದೇಶಕ್ಕೆ ಉದ್ಯೋಗಕ್ಕೆ ತರೆಳಿದ್ದರು.
ಕಳೆದ ಆರು ತಿಂಗಳಿನಿಂದ ಸಂಸಾರದಲ್ಲಿ ಅಲ್ಪ ಸ್ವಲ್ಪ ಕಿರಿಕಿರಿ ಉಂಟಾಗಿತ್ತು ಎನ್ನಲಾಗಿದ್ದು ಆದರೆ ಸಂಬಂಧಿಕರು, ಹಿರಿಯರು ಇದರ ಬಗ್ಗೆ ಮಾತನಾಡಿ ಅವರಿಗೆ ತಿಳಿ ಹೇಳುತ್ತಿದ್ದರು ಎನ್ನಲಾಗಿದೆ. ಆದರೆ ಇದು ಯಾವುದನ್ನು ಕೇಳದೆ ಏಕಾಏಕಿ ಪತಿ ರಾಶಿದ್, ಪತ್ನಿಯ ಮೊಬೈಲ್‌ಗೆ ಮೂರು ತಲಾಖ್‌ನ ವಾಟ್ಸಾಪ್ ಸಂದೇಶ ಕಳುಹಿಸಿದ್ದು, ಇದರಿಂದ ಮನನೊಂದ ಮಹಿಳೆ ಸುಳ್ಯ ಪೊಲೀಸರಿಗೆ ತನಗೆ ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾರೆ.
ಪೊಲೀಸರು ಮುಸ್ಲಿಂ ಪ್ರೊಟೆಕ್ಷನ್ ಆಫ್ ರೈಟ್ ಆಕ್ಟ್ ೨೦೧೯ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.