ಬಾಗಲಕೋಟೆ: ಚೈತ್ರಾ ಕುಂದಾಪುರ ಡೀಲ್ ಪ್ರಕರಣವು ಹೊರಬೀಳುತ್ತಿದ್ದಂತೆಯೇ ಆರೋಪಿ ಶ್ರೀಕಾಂತ್, ಕಿರಣ್‍ಗೆ ಕರೆ ಮಾಡಿ ಕಾರು ಮಹಾರಾಷ್ಟ್ರದ ಸೊಲ್ಲಾಪುರದ ಒಂದು ಬಾರ್ ಆ್ಯಂಡ್ ರೆಸ್ಟೊರೆಂಟ್ ಮುಂದೆ ಇದೆ. ಅದನ್ನು ತಂದು ನಿಮ್ಮ ಬಳಿ ಇಟ್ಕೊಳಿ ಎಂದು ಹೇಳಿರುವುದು ಇದೀಗ ಬಯಲಾಗಿದೆ.
ಶ್ರೀಕಾಂತ್ ಹೇಳಿದಂತೆ ಕಿರಣ್ ಅವರು ಸೆಪ್ಟೆಂಬರ್ 9 ರಂದು ಸೊಲ್ಲಾಪುರಕ್ಕೆ ಹೋಗಿ ಕಿಯಾ ಕಾರೆನ್ಸ್ (Kia Carens) ತಂದು ತನ್ನ ಡ್ರೈವಿಂಗ್ ಸ್ಕೂಲ್‍ನಲ್ಲಿಟ್ಟುಕೊಂಡಿದ್ದರು. ಚೈತ್ರಾ ಕುಂದಾಪುರ, ಪಿಎ ಶ್ರೀಕಾಂತ್, ಕಿರಣ್ ಕರೆಯನ್ನು ಸಿಸಿಬಿ ಪೊಲೀಸರು ಟ್ರೇಸೌಟ್ ಮಾಡಿದ್ದಾರೆ. ಈ ಆಧಾರದ ಮೇಲೆ ಕಿರಣ್ ವಶಕ್ಕೆ ಪಡೆದು ಕಾರು ಜಪ್ತಿ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.
ಇವನೇ ಕಿರಣ್: 32 ವರ್ಷದ ಕಿರಣ್ ಗಣಪ್ಪಗೊಳ ಹಿಂದೂ ಕಾರ್ಯಕರ್ತ. ಇವರು 26 ವರ್ಷದಿಂದ ರನ್ನ ಡ್ರೈವಿಂಗ್ ಸ್ಕೂಲ್ ಇಟ್ಟುಕೊಂಡಿದ್ದಾರೆ. ಮೊದಲು ಕಿರಣ್ ತಂದೆ ಭೀಮಶಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು. ಕಳೆದ ಹಲವಾರು ವರ್ಷಗಳಿಂದ ಮಗ ಕಿರಣ್ ಸ್ಕೂಲ್ ನೋಡಿಕೊಳ್ಳುತ್ತಿದ್ದಾರೆ. ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಕಾರಣ ಮೂರು ಬಾರಿ ಮುಧೋಳ ನಗರಕ್ಕೆ ಚೈತ್ರಾ ಕುಂದಾಪುರ ಅವರನ್ನು ಭಾಷಣಕ್ಕೆ ಕರೆಸಿದ್ದರು. ಈ ವೇಳೆ ಇಬ್ಬರ ಮಧ್ಯೆ ಪರಿಚಯ ಆಗಿತ್ತು.
ಸದ್ಯ ಕಿರಣ್ ಡ್ರೈವಿಂಗ್ ಸ್ಕೂಲ್‍ನಲ್ಲಿದ್ದ ಕಾರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಿಯಾ ಕಾರು ಚೈತ್ರಾ ಬಾಲಕೃಷ್ಣ ಕುಂದಾಪುರ ಹೆಸರಲ್ಲಿದೆ. ಇದನ್ನು 2023 ರಲ್ಲಿ ಚೈತ್ರಾ ಖರೀದಿ ಮಾಡಿದ್ದರು.