ಸಮಗ್ರ ನ್ಯೂಸ್: ಹಿಂದುತ್ವ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಈ ಪ್ರಕರಣಕ್ಕೆ ಮೂರನೇ ಆರೋಪಿ ಸ್ವಾಮೀಜಿ ಬಂಧನವಾದರೆ ದೊಡ್ಡವರ ಹೆಸರುಗಳು ಬಯಲಿಗೆ ಬರಲಿವೆ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಇದು ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ‘ಬಿಜೆಪಿಯ ಟಿಕೆಟ್ ಹಗರಣದಲ್ಲಿ ದಿನಕ್ಕೊಂದೊಂದು ಹೆಸರು ಹೊರಬರುತ್ತಿವೆ. ಚೈನ್ ಚೈತ್ರಳ ಆಡಿಯೋದಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಅವರ ಹೆಸರು ಪ್ರಸ್ತಾಪವಾಗಿದೆ’ ಎಂದು ಕೆಪಿಸಿಸಿ ಆರೋಪಿಸಿದೆ.
‘ಸುನಿಲ್ ಕುಮಾರ್ ಅವರಿಗೂ ಚೈತ್ರಳಿಗೂ ಈ ಹಗರಣದಲ್ಲಿ ಇರುವ ಸಂಬಂಧವೇನು ಎಂಬುದು ಇನ್ನೂ ನಿಗೂಢ. ಬಿಜೆಪಿ ನಾಯಕರ ಹೆಸರುಗಳು ಕೇಳಿ ಬಂದರೂ ಬಿಜೆಪಿ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುತ್ತಿರುವುದೇಕೆ? ಪಕ್ಷದ ಹೆಸರಲ್ಲೇ ವಂಚನೆ ನಡೆದಿದ್ದರೂ ಬಿಜೆಪಿ ದೂರು ದಾಖಲಿಸದೆ ಸುಮ್ಮನಿರುವುದೇಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ಟಿಕೆಟ್ ವಂಚನೆ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದಿದ್ದಾರೆ ಬಸವರಾಜ ಬೊಮ್ಮಾಯಿ, ಯಾವುದಾದ್ರೂ ಹೆಣ ಕಂಡರೆ ಹಿಂದೂ ಕಾರ್ಯಕರ್ತರು ಎಂದು ಬೊಬ್ಬೆ ಹೊಡೆಯುವ ಬಿಜೆಪಿ ತನ್ನ ಕಾರ್ಯಕರ್ತರು ಅಕ್ರಮ, ಅನಾಚಾರ ನಡೆಸಿದಾಗ ಜಾರಿಕೊಳ್ಳುವುದೇಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.