ಸಮಗ್ರ ನ್ಯೂಸ್: ವೈಯಕ್ತಿಕ ಆರೋಪ-ಪ್ರತ್ಯಾರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹುದ್ದೆ ಇಲ್ಲದೆ ಇದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಹುದ್ದೆ ನೀಡಿದ ಮರುದಿನವೇ ಐಪಿಎಸ್ ಅಧಿಕಾರಿ ಡಿ.ರೂಪಾ ಅವರಿಗೂ ಹುದ್ದೆ ದಯಪಾಲಿಸಿ ಸರ್ಕಾರ ಆದೇಶ ಹೊರಡಿಸಿದೆ. ರೂಪಾ ಸೇರಿದಂತೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಗುರುವಾರ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ರೂಪಾ ಅವರಿಗೆ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಐಜಿಪಿ ಹುದ್ದೆಗೆ ಸರ್ಕಾರ ನಿಯೋಜಿಸಿದೆ. ಇನ್ನುಳಿದಂತೆ ಮಂಗಳೂರು ಆಯುಕ್ತ ಹುದ್ದೆಯಿಂದ ವರ್ಗಗೊಂಡಿದ್ದ ಕುಲದೀಪ್ ಕುಮಾರ್ ಜೈನ್ ಅವರನ್ನು ಬೆಂಗಳೂರಿನ ಪೂರ್ವ ವಿಭಾಗ (ಸಂಚಾರ) ಡಿಸಿಪಿಯಾಗಿ ನೇಮಿಸಿದ ಸರ್ಕಾರವು, ಶಿವಪ್ರಕಾಶ್ ದೇವರಾಜ್ ಅವರಿಗೆ ಬೆಂಗಳೂರಿನ ದಕ್ಷಿಣ ವಿಭಾಗ (ಸಂಚಾರ) ಹುದ್ದೆ ನೀಡಿದೆ. ಬೆಂಗಳೂರು ಲೋಕಾಯುಕ್ತ ಎಸ್ಪಿ ಹುದ್ದೆಗೆ ಡಾ.ಕೋನಾ ವಂಶಿ ಕೃಷ್ಣ ಅವರನ್ನು ಸರ್ಕಾರ ನಿಯೋಜಿಸಿದೆ.
ಏಳು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬುಧವಾರ ಆದೇಶಿಸಿರುವ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿ ಡಿ.ರೂಪ ಅವರೊಂದಿಗಿನ ವಿವಾದದ ಬಳಿಕ ಯಾವುದೇ ಹುದ್ದೆ ತೋರಿಸದೆ ವರ್ಗಾವಣೆ ಮಾಡಿದ್ದ ರೋಹಿಣಿ ಸಿಂಧೂರಿ ಅವರಿಗೆ ಆರು ತಿಂಗಳ ನಂತರ ಕಡೆಗೂ ಹುದ್ದೆ ಕಲ್ಪಿಸಿದೆ. ಡಿ. ರೂಪಾ ಮತ್ತು ರೋಹಿಣಿ ಸಿಂಧೂರಿ ಅವರ ನಡುವಿನ ಸಂಘರ್ಷ ತಾರಕ್ಕೇರಿದ ಪರಿಣಾಮ ಕಳೆದ ಫೆಬ್ರವರಿ 21ರಂದು ಇಬ್ಬರೂ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಆದರೆ, ಅವರಿಗೆ ಯಾವುದೇ ಹುದ್ದೆ ತೋರಿಸಿರಲಿಲ್ಲ. ಸದ್ಯ ರೋಹಿಣಿ ಸಿಂಧೂರಿ ಅವರಿಗೆ ಕರ್ನಾಟಕ ಗೆಜೆಟಿಯರ್ ಇಲಾಖೆ ಮುಖ್ಯ ಸಂಪಾದಕ ಹುದ್ದೆ ನೀಡಲಾಗಿದೆ.