ಸಮಗ್ರ ನ್ಯೂಸ್: ಬಾಳೂರು ಹೊರಟ್ಟಿ ಪ್ರಾಥಮಿಕ ಶಾಲೆ ವತಿಯಿಂದ ನಡೆದ ಪ್ರತಿಭಾ ಕಾರಂಜಿಯಲ್ಲಿ ನಿಡುವಾಳೆ ಕ್ಲಸ್ಟರ್ ನ 13 ಪ್ರಾಥಮಿಕ ಶಾಲೆಗಳು ಭಾಗವಹಿಸಿದ್ದು, ಪ್ರತಿಭಾ ಕಾರಂಜಿಯು ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಸಹ ಪಠ್ಯ ಚಟುವಟಿಕೆಗಳ ಮೂಲಕ ಮಕ್ಕಳು ಹೆಚ್ಚು ಜ್ಞಾನ ಗಳಿಸುವ ಕಾರ್ಯಕ್ರಮವಾಗಿದೆ’ ಎಂದು ಬಾಳೂರು ಗ್ರಾ.ಪಂ.ಅಧ್ಯಕ್ಷ ಬಿ.ಬಿ.ಮಂಜುನಾಥ್ ಹೇಳಿದರು.
ಅವರು ಬಾಳೂರು ಹೊರಟ್ಟಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ವತಿಯಿಂದ ನಡೆದ ನಿಡುವಾಳೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಭಾ ಕಾರಂಜಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಸೂಕ್ತ ಪ್ರತಿಭೆ ಬೆಳಗಿಸಲು ಪ್ರತಿಭಾ ಕಾರಂಜಿ ಪ್ರಾಥಮಿಕ ಮೆಟ್ಟಿಲಾಗಿದೆ’ ಎಂದರು. ಕೆಡಿಪಿ ಸದಸ್ಯ ಬಿ.ಎಂ.ಭರತ್ ಮಾತನಾಡಿ’ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಿಂತ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿವೆ. ಇದಕ್ಕೆ ಸೇವೆ ನೀಡುತ್ತಿರುವ ಶಿಕ್ಷಕರ ಹಾಗೂ ಪೋಷಕರ ಶ್ರಮವೂ ಅಡಗಿದೆ’ ಕಳೆದ ಐದು ವರ್ಷದ ಹಿಂದೆ ಈ ಶಾಲೆ ಭೂಕುಸಿತದಿಂದ ಕಟ್ಟಡ ನೆಲಸಮವಾಗಿತ್ತು.
ಆಗ ಟೆಂಟ್ ಹಾಕಿ ಮಕ್ಕಳಿಗೆ ನೆಲದಲ್ಲಿ ಕೂರಿಸಿ ಪಾಠ ಮಾಡಲಾಗುತ್ತಿತ್ತು. ಸುದ್ದಿ ರಾಜ್ಯ ಮಟ್ಟದವರೆಗೆ ತಲುಪಿದಂತೆ ಸರ್ಕಾರ ಈ ಶಾಲೆಯ ಬಗ್ಗೆ ಒಲವು ತೋರಿಸಿ ನೂತನ ಕಟ್ಟಡ ನಿರ್ಮಿಸಿ ಬಡ ಮಕ್ಕಳಿಗೆ ಓದಲು ಅನುಕೂಲ ಮಾಡಿ ಕೊಟ್ಟಿದೆ.ಮಕ್ಕಳು ಚೆನ್ನಾಗಿ ಓದಿ ಶಾಲೆಗೆ ಕೀರ್ತಿ ತರಬೇಕು’ಎಂದರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯ ಮನೋಜ್ ಮಾತನಾಡಿದರು.ಮುಖ್ಯ ಶಿಕ್ಷಕ ಕೆ.ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಾ ಕಾರಂಜಿಯಲ್ಲಿ ಛದ್ಮವೇಷ, ಅಭಿನಯಗೀತೆ, ಕವನವಾಚನ, ವಿಜ್ಞಾನ ಮಾದರಿ, ಚಿತ್ರಕಲೆ, ಕಂಠಪಾಠ, ಧಾರ್ಮಿಕ ಪಠಣ ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಇನ್ನು ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಮಾರಂಭದಲ್ಲಿ ಶಾಲೆಯಲ್ಲಿ ಹಿಂದೆ ಸೇವೆ ನೀಡಿದ ಶಿಕ್ಷಕರನ್ನು, ನೆರವು ನೀಡಿದ ಗ್ರಾ.ಪಂ.ಪದಾಧಿಕಾರಿಗಳನ್ನು ಹಾಗೂ ಪಿಡಿಒ ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮೂಡಿಗೆರೆ ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಳೂರು, ಗ್ರಾ.ಪಂ. ಉಪಾಧ್ಯಕ್ಷೆ ಗೀತಾ, ಸದಸ್ಯ ಮನೋಜ್, ಪ್ರಕಾಶ್ , ಶಾಲಾ ಸಮಿತಿ ಅಧ್ಯಕ್ಷ ಬಿ.ಪಿ.ವೆಂಕಟೇಶ್, ಉಪಾಧ್ಯಕ್ಷೆ ಗಾನವಿ, ಸಿ ಆರ್ ಪಿ ವೆಂಕಟೇಶ್, ಸಹಶಿಕ್ಷಕಿ ಶ್ಯಾಮಲ, ಪೋಷಕರು, ಗ್ರಾಮಸ್ಥರಾದ ನಾರಾಯಣಗೌಡ, ಗೋಪಾಲ್ ಗೌಡ, ಸೋಮಯ್ಯ, ರಘುಪತಿ ಮತ್ತಿತರರು ಇದ್ದರು.