ಸಮಗ್ರ ನ್ಯೂಸ್: ಉತ್ತರ ಆಫ್ರಿಕಾ ರಾಷ್ಟ್ರ ಲಿಬಿಯಾದ ಪೂರ್ವ ಭಾಗದಲ್ಲಿ ವಾರಾಂತ್ಯದಲ್ಲಿ ಅಬ್ಬರಿಸಿದ ಡೇನಿಯಲ್ ಚಂಡಮಾರುತದಿಂದ ಉಂಟಾದ ಪ್ರವಾಹದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, ಸಾವಿರಾರು ಮಂದಿ ಕಣ್ಮರೆಯಾಗಿದ್ದಾರೆ ಎಂದು ಪೂರ್ವ ಲಿಬಿಯಾ ಸರ್ಕಾರದ ಪ್ರಧಾನಿ ಒಸಾಮಾ ಹಮದ್ ಸೋಮವಾರ ಹೇಳಿದ್ದಾರೆ.
‘ಅಲ್ ಮಸರ್ ಟೆಲಿವಿಷನ್’ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಒಸಾಮಾ ಹಮದ್ ಅವರು, ಮೆಡಿಟರೇನಿಯನ್ನಿಂದ ಡೇನಿಯಲ್ ಚಂಡಮಾರುತ ದೇಶಕ್ಕೆ ಅಪ್ಪಳಿಸಿದ ನಂತರ ವಿಪತ್ತು ವಲಯವೆಂದು ಘೋಷಿಸಲಾದ ಡರ್ನಾದಲ್ಲಿ ಪ್ರವಾಹವು ನೆರೆಹೊರೆಯ ಪ್ರದೇಶಗಳನ್ನು ಸಂಪೂರ್ಣ ನಾಶಪಡಿಸಿದೆ. ಡರ್ನಾ ವಲಯದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸಾವಿರಾರು ಜನರು ಕಾಣೆಯಾಗಿದ್ದಾರೆ ಎಂದು ಅವರು ಹೇಳಿದರು.
ಚಂಡಮಾರುತದ ಮುನ್ನೆಚ್ಚರಿಕೆಯಾಗಿ ಶನಿವಾರವೇ ಶಾಲಾ, ಕಾಲೇಜು ತರಗತಿಗಳಿಗೆ ರಜೆ ನೀಡಲಾಗಿತ್ತು. ಪರಿಸ್ಥಿತಿ ನಿಭಾಯಿಸಲು ಪ್ರಧಾನಿಯು ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು.