ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ಮೈತ್ರಿ ಮುಟ್ಟಿನ ಕಪ್ ಯೋಜನೆ ವಿತರಣಾ ಬೃಹತ್ ಕಾರ್ಯಕ್ರಮಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿನಲ್ಲಿ ಚಾಲನೆ ನೀಡಿದರು.
ರಾಜ್ಯ ಸರ್ಕಾರ ಆರಂಭಿಸಿರುವ ‘ಮೈತ್ರಿ ಮುಟ್ಟಿನ ಕಪ್’ ಯೋಜನೆಗೆ ಕನ್ನಡ ಚಿತ್ರರಂಗದ ಕಾಂತಾರ ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ ರಾಯಭಾರಿ ಆಗಿದ್ದಾರೆ. ಮಂಗಳೂರಿನ ಕಾರ್ಯಕ್ರಮದಲ್ಲಿ ಭಾಗಿಯಾದ ಸಪ್ತಮಿ ಗೌಡ ಮುಟ್ಟಿನ ಕಪ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
‘ತಾನು ಸ್ವಿಮ್ಮಿಂಗ್ ನಲ್ಲಿ ಮೊದಲ ಬಾರಿಗೆ ಚಿನ್ನದ ಪದಕ ಪಡೆದಿದ್ದು ಮಂಗಳೂರಿನಲ್ಲಿ, ಸಿನಿಮಾದಲ್ಲಿ ಹೆಸರು ಬಂದಿದ್ದು ಮಂಗಳೂರಿನಿಂದಲೇ ಅದೇ ರೀತಿ ಮೈತ್ರಿ ಯೋಜನೆಗೆ ಮಂಗಳೂರಿನಿಂದಲೇ ರಾಯಭಾರಿಯಾಗಿ ಆಗಿರುವುದಕ್ಕೆ ಹೆಮ್ಮೆಯಿದೆ. ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಮುಂದಿದ್ದಾರೆ. ಆದರೆ ಮುಟ್ಟಿನ ಕಾರಣಕ್ಕೆ ಹಿಂದೆ ಉಳಿಯಬಾರದು. ಪ್ಯಾಡ್‌ನ ತ್ಯಾಜ್ಯವನ್ನು ಎಸೆಯೋದು ಹೇಗೆ ಎಂಬುದೇ ಕಷ್ಟ. ಆದರೆ ಮುಟ್ಟಿನ ಕಪ್‌ನಿಂದ ಅಂತಹ ಯಾವುದೇ ತೊಂದರೆಯಿಲ್ಲ ಎಂದರು.
ಶುಚಿ ನನ್ನ ಮೈತ್ರಿ ಯೋಜನೆಯ ರಾಯಭಾರಿಯನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಸರ್ಕಾರಕ್ಕೆ ನಾನು ಅಭಾರಿಯಾಗಿದ್ದೇನೆ. ಋತುಚಕ್ರದ ಕಾರಣಕ್ಕೆ ಹೆಣ್ಣುಮಕ್ಕಳು ಚಟುವಟಿಕೆಯಿಂದ ಹಿಂದೆ ಸರಿಯುವುದನ್ನು ತಡೆಯಲು ಮುಟ್ಟಿನ ಕಪ್ ಸಹಕಾರಿ. ನನ್ನ ವೈಯಕ್ತಿಕ ಅನುಭವದಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಹೇಳಿದರು.
ಒಬ್ಬ ಮಹಿಳೆ ಎಲ್ಲ ಋತು ಚಕ್ರಗಳನ್ನು ಪೂರೈಸುವಾಗ ಸುಮಾರು 200 ಕೆ.ಜಿ.ಗಳಷ್ಟು ಬ್ಯಾನಿಟರಿ ಪ್ಯಾಡ್‌ಗಳನ್ನು ಬಳಸಬೇಕಾಗುತ್ತದೆ. ಇದರಿಂದ ಎಷ್ಟೊಂದು ವ್ಯಾಜ್ಯ ಉತ್ಪತ್ತಿಯಾಗುತ್ತದೆ ನೀವೇ ಊಹಿಸಿ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೂ ಮುಟ್ಟಿನ ಆಪ್ ಬಳಕೆ ಸೂಕ್ತ. ಇದರ ಬಳಕೆಯೂ ಸರಳ, ಶುಚಿತ್ವ ಕಾಪಾಡುವುದಕ್ಕೂ ಇದು ಸಹಕಾರಿ, ಕಪ್ ಬಳಸಿದರೆ, ಬಟ್ಟೆಯಲ್ಲಿ ಮುಟ್ಟಿನ ದಿನದಿಂದ ಉಂಟಾಗುವ ಕಲೆಗಳ ಬಗ್ಗೆ, ರಕ್ತ ಒಸರುವಿಕೆಯ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ, ಇವುಗಳ ನಿರ್ವಹಣೆಯೂ ಸುಲಭ. ಈ ಕಾರಣಕ್ಕಾಗಿಯೇ ದೇಶದ ಹಾಗೂ ಜಗತ್ತಿನ ಮಹಿಳೆಯರು ಮುಟ್ಟಿನ ಕಪ್ ಬಳಕೆಗೆ ಒಲವು ತೋರಿಸುತ್ತಿದ್ದಾರೆ ಎಂದು ವಿವರಿಸಿದರು.
ಮದುವೆಯಾಗದ ಹೆಣ್ಣುಮಕ್ಕಳು ಇದನ್ನು ಬಳಸಬಹುದೇ ಎಂಬ ಚಿಂತೆ ಅನೇಕ ತಾಯಂದಿರನ್ನು ಕಾಡುತ್ತಿದೆ. ನನ್ನ ತಾಯಿಗೂ ಇದೇ ಚಿಂತೆ ಇತ್ತು. ಇದರ ಮಹತ್ವದ ಬಗ್ಗೆ ಮೊದಲು ತಾಯಂದಿರಲ್ಲಿ ಅರಿವು ಮೂಡಿಸಬೇಕು. ಇದನ್ನು ಬಳಸುವ ಪ್ರತಿ ವಿದ್ಯಾರ್ಥಿನಿಯೂ ಈ ಯೋಜನೆಯ ರಾಯಭಾರಿಗಳಾಗಬೇಕು. ಇದರ ಪ್ರಯೋಜನಗಳ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಿ ಎಲ್ಲರೂ ಬಳಸುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.
ಇನ್ನು ಈ ಯೋಜನೆಗೆ ಚಾಲನೆಗೆ ನೀಡಿದ ಬಳಿಕ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಪ್ರತಿಯೊಬ್ಬ ವಿದ್ಯಾರ್ಥಿನಿಯರು ಮೈತ್ರಿ ಯೋಜನೆಯ ರಾಯಭಾರಿಗಳಾಗಿ, ಮುಟ್ಟಿನ ಕಪ್ ಹೆಚ್ಚು ಹೆಚ್ಚು ಬಳಕೆಗೆ ಪ್ರೇರಕರಾಗಬೇಕು. ಮೈತ್ರಿ ಯೋಜನೆ ಮಂಗಳೂರಿನಲ್ಲಿ ಯಶಸ್ವಿಯಾಗಿದೆ. ಆದ್ದರಿಂದ ಇದನ್ನು ರಾಜ್ಯಾದ್ಯಂತ ತೆಗೆದುಕೊಂಡು ಹೋಗಲಿದ್ದೇವೆ ಎಂದು ಹೇಳಿದರು.
ಇಂದು ಮಂಗಳೂರಿನಲ್ಲಿ11 ಸಾವಿರ ಹಾಗೂ ಚಾಮರಾಜನಗರದಲ್ಲಿ 4 ಸಾವಿರ ಮೈತ್ರಿ ಯೋಜನೆಯ ಮುಟ್ಟಿನ ಕಪ್ ಸೇರಿ ಒಟ್ಟು 15 ಸಾವಿರ ಶಾಲಾ – ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಮುಟ್ಟಿನ ಕಪ್ ವಿತರಣೆ ಮಾಡಲಾಯಿತು.
ಋತುಚಕ್ರದ ವೇಳೆ ಮಹಿಳೆಯರಿಗೆ ಎಲ್ಲದಕ್ಕೂ ಅನಾನುಕೂಲ. ಆದ್ದರಿಂದ ಅಂತಹ ಸನ್ನಿವೇಶ ಸೃಷ್ಟಿಯಾಗದಿರಲೆಂದು ಹಿಂದಿನ ಸಿದ್ದರಾಮಯ್ಯ ಸರಕಾರ ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡಿತ್ತು. ಇದೀಗ ಮೂರು ವರ್ಷಗಳ ಬಳಿಕ ಸರಕಾರ ಮೈತ್ರಿ ಯೋಜನೆಯ ಮೂಲಕ ಹೊಸದಾಗಿ ಅನುಷ್ಠಾನ ಮಾಡುತ್ತಿದೆ. ಈ ಮೂಲಕ ರಾಜ್ಯದ ಸರಕಾರಿ ಶಾಲಾ – ಕಾಲೇಜುಗಳ 40 ಲಕ್ಷ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಮುಟ್ಟಿನ ಕಪ್ ವಿತರಣೆ ಮಾಡಲಾಗುತ್ತದೆ ಎಂದರು.
ಈ ಮುಟ್ಟಿನ ಕಪ್ ನಿಂದ ಹಣ ಉಳಿತಾಯವಾಗಲಿದೆ. ಅಲ್ಲದೆ ಋತುಚಕ್ರದ ದಿನಗಳಲ್ಲಿ ಮುಟ್ಟಿನ ಕಪ್ ಧರಿಸಿ ಹೆಣ್ಣುಮಕ್ಕಳು ಧೈರ್ಯವಾಗಿ ಸಂಕೋಚವಿಲ್ಲದೆ ಹೋಗಬಹುದು. ಸ್ಯಾನಿಟರಿ ಪ್ಯಾಡ್ ಸಾಕಷ್ಟು ತ್ಯಾಜ್ಯ ಸೃಷ್ಟಿಸಿ ಪರಿಸರ ಮಾರಕವಾಗಿದ್ದರೆ. ಆದರೆ ಮುಟ್ಟಿನ ಕಪ್ ಪರಿಸರ ಸ್ನೇಹಿಯಾಗಿದೆ. ಒಂದು ಮುಟ್ಟಿನ ಕಪ್ ಅನ್ನು ಕನಿಷ್ಠವೆಂದರೆ ಐದು ವರ್ಷಗಳ ಕಾಲ ಮರುಬಳಕೆ ಮಾಡಬಹುದು. ಮೊದಲಾಗಿ ಈ ಮುಟ್ಟಿನ ಕಪ್ ಅನ್ನು ಆರು ತಿಂಗಳ ಕಾಲ ಪ್ರಾಯೋಗಿಕವಾಗಿ ಬಳಸಿದಾಗ ಹೆಣ್ಣು ಮಕ್ಕಳ ತಾಯಂದಿರೇ ಇದಕ್ಕೆ ವಿರೋಧವಿದ್ದರು. ಆದ್ದರಿಂದ ತಾಯಂದಿರಿಗೂ ಜಾಗೃತಿ ಮೂಡಿಸಲಾಗಿತ್ತು ಎಂದು ದಿನೇಶ್ ಗುಂಡೂರಾವ್ ಹೇಳಿದರು.
ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಶ್ರೀಮಂತರು ಬಳಸುವ ವ್ಯವಸ್ಥೆ ಕಡುಬಡವರಿಗೂ ಸಿಗಬೇಕೆಂದು ಮೈತ್ರಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಆರೋಗ್ಯವಂತ ಮಕ್ಕಳಿಂದ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ, ಪರಿಸರ ಜಾಗೃತಿಯ ಹಿನ್ನೆಲೆಯಲ್ಲಿ ಈ ಯೋಜನೆ ಸಹಕಾರಿ. ಆದ್ದರಿಂದ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿನಿಯರು ತಮ್ಮ ತಮ್ಮ ಪ್ರದೇಶಗಳಲ್ಲಿ ಮೈತ್ರಿ ಯೋಜನೆಯ ರಾಯಭಾರಿಗಳಾಗಬೇಕು ಎಂದರು.